ಕುಮಟಾ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಯಾಣದ ಶ್ರೀ ಗಂಗಾ-ಚಂಡಿಕಾ ಭೈರವೇಶ್ವರ ಮಂದಿರದಲ್ಲಿ ಗುರುವಾರ ಭಾರತೀಯ ಅಂಚೆ ಇಲಾಖೆ ವತಿಯಿಂದ ಯಾಣದ ಮುಖ್ಯ ಶಿಲಾಶಿಖರದ ಭವ್ಯ ಚಿತ್ರಣವುಳ್ಳ ಅಂಚೆ ಕಾರ್ಡ್ (ಪಿಕ್ಚರ್ ಪೋಸ್ಟ್ ಕಾರ್ಡ್) ಮತ್ತು ಕಾಯಂ ಸಚಿತ್ರ ರದ್ಧತಿ ಮುದ್ರೆ (ಪರ್ಮನೆಂಟ್ ಪಿಕ್ಚೋರಿಯಲ್ ಕ್ಯಾನ್ಸಲೇಷನ್)ನ್ನು ಬಿಡುಗಡೆಗೊಳಿಸಲಾಯಿತು.
ಅತಿಥಿಗಳಾದ ಶ್ರೀಗಂಗಾ-ಚಂಡಿಕಾ ಭೈರವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ರಾಮಚಂದ್ರ ಜಿ. ಭಟ್ ಹಾಗೂ ಟ್ರಸ್ಟಿ ಈಶ್ವರ ವಿ. ಭಟ್ ಮಾತನಾಡಿ, ಯಾಣದ ಭವ್ಯತೆಯನ್ನು, ಮಹತ್ವವನ್ನು ಗುರುತಿಸಿ ಅಂಚೆ ಇಲಾಖೆಯ ಕಾರ್ಡಿನಲ್ಲಿ ಪ್ರಚುರಪಡಿಸಿರುವುದು ನಮ್ಮೆಲ್ಲರಿಗೆ ಅಭಿಮಾನದ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ವಲಯದ ಧಾರವಾಡ ಅಂಚೆ ಸೇವಾ ನಿರ್ದೇಶಕ ಹರ್ಷ ಎನ್. ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಸಂದರ್ಭೋಚಿತವಾಗಿ ಮಾತನಾಡಿದರು. ದೇವಾಲಯ ಆಡಳಿತ ಮಂಡಳಿ, ಭಜಕರು, ಗ್ರಾಮಸ್ಥರು ಹಾಗೂ ಅಂಚೆ ಇಲಾಖೆಯವರು ಹಾಜರಿದ್ದರು.