ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಸಮಾರೋಪ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಗಿಂತ ಬಂದುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ಅನಾದಿಕಾಲದಿಂದಲೂ ಬಂದಿದೆ. ಪ್ರತಿಯೊಬ್ಬ ಹೆಣ್ಣು ಮಗಳು ಅದೆಷ್ಟೇ ತೊಂದರೆ ಬಂದರೂ ತಾಳ್ಮೆಯಿಂದ ನಿರ್ವಹಿಸುತ್ತಾರೆ ಎಂದು ಹೇಳಿದರು.
ಸ್ತ್ರೀ ಕುಟುಂಬ ನಿರ್ವಹಣೆಯಲ್ಲಿ ಯಾವ ಆರ್ಥಿಕ ತಜ್ಞರಿಗಿಂತಲೂ ಕಡಿಮೆ ಇಲ್ಲ. ಅವಿದ್ಯಾವಂತಳಾಗಿದ್ದರೂ ಕುಟುಂಬ ನಿರ್ವಹಣೆಯಲ್ಲಿ ಗಂಡ, ಅತ್ತೆ, ಮಾವ, ಮಕ್ಕಳು ದನಕರುಗಳ ಜೊತೆಗೆ ಕುಟುಂಬದ ಎಲ್ಲ ಸದಸ್ಯರಿಗೆ ಊಟ ಬಡಿಸುವ ಗುರುತರ ಜವಾಬ್ದಾರಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾಳೆ. ಹಿಂದೆ ಮಹಿಳೆಯರಿಗೆ ಅಡಿಗೆ ಮನೆಯೇ ಸೀಮಿತವಾಗಿತ್ತು. ಆದರೆ ಇಂದು ಶೇ.50ರಷ್ಟು ಮೀಸಲಾತಿ ರಾಜಕೀಯ ರಂಗದಲ್ಲಿಯೂ ಕಲ್ಪಿಸಲಾಗಿದೆ. ಅಲ್ಲದೆ ಇಂದು ಸ್ತ್ರೀ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಇತ್ತೀಚಿನ ಗಗನಯಾತ್ರಿ ಸುನಿತಾ ವಿಲಿಯಂ ಸಾಧನೆ ಮೆಚ್ಚುವಂತಹದ್ದಾಗಿದೆ. ಅಂತಹ ಅದೇಷ್ಟೋ ಮಹಿಳೆಯರು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಶೈಕ್ಷಣಿಕ, ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆಯಾಗಿದ್ದು, ಹೆಣ್ಣು-ಗಂಡಿನ ನಡುವೆ ಶಾರೀರಿಕವಾಗಿ ವ್ಯತ್ಯಾಸ ಇದ್ದರೂ ಸಹ ಮಹಿಳೆ ಮಾತ್ರ ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿರುತ್ತಾಳೆ. ನಮ್ಮ ಮಹಿಳೆಗೆ ನಮ್ಮ ದೇಶದಲ್ಲಿ ಸಿಗುವ ಗೌರವ, ಮಾನ್ಯತೆ ವಿಶ್ವದ ಯಾವ ಮೂಲೆಯಲ್ಲೂ ದೊರಕುವುದಿಲ್ಲ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ ಮಹಿಳೆ ನಿಲ್ಲುತ್ತಾಳೆ. ಇಂದು ಹೆಣ್ಣು ಮಕ್ಕಳ ಸಂಖ್ಯೆ ಕಡಿಯಾಗುತ್ತಿರುವುದು ಆತಂಕಕಾರಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಗೆ ವಿಶಿಷ್ಟ ಸ್ಥಾನ ಕೊಡುವ ನಿಟ್ಟಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.
- ಶಶಿಧರ ಕುರೇರ ಜಿಪಂ ಸಿಇಒ