ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡೆಯಾಜ್ಞೆ ಶೀಘ್ರ ತೆರವು: ಕೋಟ ಸ್ಪಷ್ಟನೆ

KannadaprabhaNewsNetwork |  
Published : Jul 09, 2025, 12:25 AM IST
08ಇಂದ್ರಾಳಿ | Kannada Prabha

ಸಾರಾಂಶ

ಮಲ್ಪೆ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ೧೬೯ ಎ ಅಗಲೀಕರಣ ಕಾಮಗಾರಿಯಲ್ಲಿ, ಸ್ಥಗಿತಗೊಂಡು ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಪರ್ಕಳ ಭಾಗವನ್ನು ತಕ್ಷಣ ಸರಿಪಡಿಸಲು ಎಂಜಿನಿಯರ್‌ಗಳನ್ನು ಕರೆದು ನಿರ್ದೇಶಿಸಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಲ್ಪೆ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ೧೬೯ ಎ ಅಗಲೀಕರಣ ಕಾಮಗಾರಿಯಲ್ಲಿ, ಸ್ಥಗಿತಗೊಂಡು ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಪರ್ಕಳ ಭಾಗವನ್ನು ತಕ್ಷಣ ಸರಿಪಡಿಸಲು ಎಂಜಿನಿಯರ್‌ಗಳನ್ನು ಕರೆದು ನಿರ್ದೇಶಿಸಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಸಮಸ್ಯೆ ಬಗ್ಗೆ ಸ್ಥಳೀಯರು ಭಾನುವಾರ ಉಗ್ರ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸಂಸದರು ಸ್ಪಷ್ಟೀಕರಣ ನೀಡಿದ್ದಾರೆ. ಪರ್ಕಳದ ಕಾಮಗಾರಿಯ ಬಗ್ಗೆ ಮಾಧ್ಯಮಗಳಲ್ಲಿ ಏಕಮುಖದ ವರದಿ ಪ್ರಕಟವಾದಂತಿದೆ. ವಾಸ್ತವಿಕವಾಗಿ ಪರ್ಕಳದ ತಿರುವು ನೇರಗೊಳಿಸಿ ಕಾಮಗಾರಿ ನಡೆಯುತ್ತಿರುವಾಗ ೧೧ ಮಂದಿ ಭೂಮಾಲೀಕರು ಹೈಕೋರ್ಟಿಂದ ತಡೆಯಾಜ್ಞೆ ತಂದಿದ್ದರು. ಈ ರಸ್ತೆ ತಿರುವಿನಿಂದಾಗುವ ಅಪಘಾತಗಳ ಅಂಕೆಸಂಖ್ಯೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತಡೆಯಾಜ್ಞೆ ತೆರವುಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶಿಸಲಾಗಿತ್ತು. ಈ ೧೧ ಮಂದಿಯ 8 ಕೋಟಿ ರು. ಭೂಪರಿಹಾರವನ್ನು ನ್ಯಾಯಾಲಯದ ಮೂಲಕ ಠೇವಣಿಯಾಗಿರಿಸಿದೆ. ಪುನಃ ಕಾಮಗಾರಿ ಆರಂಭವಾಗುತ್ತಲೇ ಈ ಭೂಮಾಲಿಕರು ಮತ್ತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನಾನೇ ಸ್ವತಃ ರಾಹೆ ಪರ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವು ಮಾಡಲು ಪ್ರಯತ್ನಿಸಿದ್ದೇನೆ. ಸದ್ಯದಲ್ಲಿ ತಡೆಯಾಜ್ಞೆ ತೆರವಾಗುವ ನಂಬಿಕೆಯಿದೆ. ತಕ್ಷಣ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಂಸದರು ಭರವಸೆ ವ್ಯಕ್ತಪಡಿಸಿದ್ದಾರೆ.

ಎಫ್‌ಐಆರ್ ಹಾಕಿದ್ದು ದಾಖಲೆ !

ಇಂದ್ರಾಳಿಯ ಮೇಲ್ಸೇತುವೆ ಬಗ್ಗೆ ನಿರಂತರ ಪ್ರತಿಭಟನೆ ಶವದ ಮೆರವಣಿಗೆ, ತಲೆಬೋಳಿಸುವಿಕೆ ನಡುವೆಯೂ ಹತ್ತಾರು ಬಾರಿ ಸ್ಥಳದಲ್ಲೇ ನಿಂತು ಕಾಮಗಾರಿಗೆ ವೇಗ ಕೊಟ್ಟಿದ್ದೇನೆ. ಈ ಕಾಮಗಾರಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಎಫ್ಐಆರ್ ದಾಖಲಿಸಿ ಕಾಮಗಾರಿಗೆ ವೇಗ ನೀಡಿದ್ದು ಸರ್ಕಾರಿ ವ್ಯವಸ್ಥೆಯಲಿಯೇ ಅಪರೂಪ. ಇದೀಗ ಇಂದ್ರಾಳಿ ಮೇಲ್ಸೇತುವೆ ಕಾಂಕ್ರೀಟೀಕರಣಕ್ಕೆ ಅಣಿಗೊಂಡಿದೆ. ಬಹುತೇಕ ದಿನಂಪ್ರತಿ ಕಾಮಗಾರಿಯ ಪ್ರಗತಿಯ ತನಿಖೆಯನ್ನು ಸ್ವತಃ ನಾನೇ ಗಮನಿಸುತ್ತಿದ್ದೇನೆ ಎಂದು ಸಂಸದರು ಹೇಳಿದ್ದಾರೆ.

ಮಕ್ಕಳು ಹಕ್ಕುಗಳ ಉಲ್ಲಂಘನೆ!

ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬದ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಅಣಕು ಶವ ಮೆರವಣಿಗೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದು, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗೆ ವಿರುದ್ಧವಾಗಿದ್ದರೂ ಸಹ, ನಾನದನ್ನು ಮೌನವಾಗಿ ಸಹಿಸಿಕೊಂಡಿದ್ದೆ. ಆದಾಗ್ಯೂ ಪ್ರಜಾತಂತ್ರ ವ್ಯವಸ್ಥೆಯಡಿ ಮಾಡುವ ಎಲ್ಲಾ ಪ್ರತಿಭಟನೆ ಗೌರವಿಸುತ್ತೇನೆ ಹಾಗೂ ವಿರೋಧಿಸುವವರು ಮೆಚ್ಚುವಂತೆ ಮೇಲಿನ ಎಲ್ಲಾ ಕಾಮಗಾರಿಗಳನ್ನು ಮುಗಿಸುವುದು ನನ್ನ ಗುರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು