ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮಾತ್ರವಲ್ಲದೆ ಜನರು ಕೂಡ ಸೋಲು - ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಯಾರ ಕೊರಳಿಗೆ ವಿಜಯಮಾಲೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬದ್ಧ ರಾಜಕೀಯ ಎದುರಾಳಿಗಳಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬದಲಾದ ರಾಜಕೀಯದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿಕೊಂಡಿತು. ಸ್ಥಾನಗಳ ಹಂಚಿಕೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಪಾಲಾಯಿತು.
ಕಾಂಗ್ರೆಸ್ ಪಕ್ಷದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿದರೆ, ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಪಕ್ಷ ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾದ ನಾರಾಯಣ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿತು.ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಡಿ.ಕೆ.ಸುರೇಶ್ ಅವರು ಚುನಾವಣೆಗೆ ಒಂದು ವರ್ಷ ಇರುವಂತೆಯೇ ಸಿದ್ಧತೆ ಮಾಡಿಕೊಂಡಿದ್ದರು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಿದ್ದರು. ಶಾಸಕರ ಬಲ ಮತ್ತು ಗ್ಯಾರಂಟಿಗಳು ತಮ್ಮ ಗೆಲುವಿಗೆ ನೆರವಾಗಲಿದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತಗಳು ಒಗ್ಗೂಡಿದರೆ ಗೆಲುವು ಕಷ್ಟವೇನಲ್ಲ ಎನ್ನುವುದು ಮೈತ್ರಿ ಪಾಳಯದ ಲೆಕ್ಕಾಚಾರವಾಗಿದೆ. ಇಡೀ ಕ್ಷೇತ್ರದಲ್ಲಿ ಮೈತ್ರಿ ಪ್ರಚಾರ ಯಶಸ್ವಿಯಾಗಿದ್ದು, ಮತದಾರರು ಕೈ ಹಿಡಿಯಲಿದ್ದಾರೆ ಎನ್ನುವ ವಿಶ್ವಾಸ ಉಭಯ ಪಕ್ಷಗಳ ನಾಯಕರದ್ದಾಗಿದೆ.
ಕಮಲ ಪಾಳಯವು ನಗರ ಮತದಾರರನ್ನು ಬಹುವಾಗಿ ನೆಚ್ಚಿಕೊಂಡಿತ್ತು. ಆದರೆ, ಬೆಂಗಳೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಆ ಮತಗಳು ಯಾರ ಪಾಲಾಗಿವೆ ಎಂಬುದು ಬಿಜೆಪಿ ಮತ್ತು ಕಾಂಗ್ರೆಸ್ ನವರನ್ನು ಚಿಂತೆಗೀಡು ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಜಾತಿ ಲೆಕ್ಕಾಚಾರ ಜೋರಾಗಿತ್ತು. ಇನ್ನು ಮತದಾನದ ನಂತರ ಇದು ಇನ್ನಷ್ಟು ಹೆಚ್ಚಾಯಿತು. ಯಾವ ಸಮುದಾಯದ ಮತಗಳು ಯಾರಿಗೆ ಬಂದಿವೆ. ಯಾವ ಜಾತಿಯ ಮುಖಂಡ ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ರಾಜಕೀಯ ನಾಯಕರು ಮಾಹಿತಿ ಸಂಗ್ರಹಿಸುವುದರಲ್ಲಿ ತೊಡಗಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ - ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರ ನಡುವೆ ನೇರ ಹಣಾಹಣಿ ನಡೆದಿದೆ. ಚುನಾವಣಾ ಫಲಿತಾಂಶ ಉಭಯ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಭ್ಯರ್ಥಿಗಳ ಜತೆಗೆ ಬಾಜಿದಾರರ ಭವಿಷ್ಯವೂ ನಿರ್ಧಾರ ! :
ಚುನಾವಣಾ ಫಲಿತಾಂಶ, ಗೆಲುವಿನ ಅಂತರಗಳ ಮೇಲೆಯು ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಿಂತಲ್ಲೂ ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತಿದೆ.
3ಕೆಆರ್ ಎಂಎನ್ 1,2.ಜೆಪಿಜಿ1.ಕಾಂಗ್ರೆಸ್ ಡಿ.ಕೆ.ಸುರೇಶ್.
2.ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್.