ಕಾರ್ಪೊರೇಟ್ ಕಂಪನಿಗಳ ಲಾಭಕ್ಕೆ ಯಾವುದೇ ಮಿತಿಯಿಲ್ಲದಿದ್ದರೂ ಕಾರ್ಮಿಕರ ವೇತನ ಮತ್ತು ಸೌಲಭ್ಯಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ೨೦೨೬ರ ಫೆಬ್ರವರಿ ೧೨ರಂದು ನಡೆದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವು ಕಾರ್ಮಿಕರ ಅಸಮಾಧಾನ ಮತ್ತು ಆಕ್ರೋಶವನ್ನು ಪ್ರತಿಬಿಂಬಿಸಿದೆ ಎಂದರು. ಕಾರ್ಮಿಕ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ದಮನಕಾರಿ ಕ್ರಮಗಳ ನಡುವೆಯೂ ಕಾರ್ಮಿಕ ವರ್ಗ ತನ್ನ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾದ ಆಡಳಿತ ಕ್ರಮಗಳನ್ನು ವಿರೋಧಿಸಿ, ದುಡಿಯುವ ವರ್ಗದ ನ್ಯಾಯಯುತ ಹಕ್ಕುಗಳ ರಕ್ಷಣೆಗಾಗಿ ಡಿಸೆಂಬರ್ ೧ರಂದು ನವದೆಹಲಿಯಲ್ಲಿ ಬೃಹತ್ ‘ಸಂಸತ್ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಎಸ್. ವರಲಕ್ಷ್ಮೀ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲದೊಂದಿಗೆ ನಡೆಯಲಿರುವ ಈ ಹೋರಾಟವು ದೇಶದ ಕಾರ್ಮಿಕ ವರ್ಗದ ಹಕ್ಕುಗಳಿಗಾಗಿ ನಡೆಯುತ್ತಿರುವ ಮಹತ್ವದ ಹೋರಾಟವಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಕಾರ್ಮಿಕರನ್ನು ಸಂಘಟಿಸಲಾಗುತ್ತಿದೆ. ನವೆಂಬರ್ ೨ರಂದು ರಾಜ್ಯದ ವಿವಿಧೆಡೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಸಂಸತ್ ಚಲೋ ಹೋರಾಟದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು. ದೇಶದ ಬಹುಪಾಲು ಜನರು ತಮ್ಮ ಶ್ರಮದಿಂದ ಆರ್ಥಿಕ ವ್ಯವಸ್ಥೆಗೆ ಕೊಡುಗೆ ನೀಡುತ್ತಿದ್ದರೂ ಅವರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಾದ ವೇತನ ಮತ್ತು ಸಾಮಾಜಿಕ ಭದ್ರತೆ ದೊರೆಯುತ್ತಿಲ್ಲ. ಮತ್ತೊಂದೆಡೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಕೋಟಿ ರುಪಾಯಿ ಸಾಲಮನ್ನಾ ಹಾಗೂ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಆದರೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳ ಲಾಭಕ್ಕೆ ಯಾವುದೇ ಮಿತಿಯಿಲ್ಲದಿದ್ದರೂ ಕಾರ್ಮಿಕರ ವೇತನ ಮತ್ತು ಸೌಲಭ್ಯಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ೨೦೨೬ರ ಫೆಬ್ರವರಿ ೧೨ರಂದು ನಡೆದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವು ಕಾರ್ಮಿಕರ ಅಸಮಾಧಾನ ಮತ್ತು ಆಕ್ರೋಶವನ್ನು ಪ್ರತಿಬಿಂಬಿಸಿದೆ ಎಂದರು. ಕಾರ್ಮಿಕ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ದಮನಕಾರಿ ಕ್ರಮಗಳ ನಡುವೆಯೂ ಕಾರ್ಮಿಕ ವರ್ಗ ತನ್ನ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.ಕಾರ್ಮಿಕರಿಗೆ ಕನಿಷ್ಠ ಮಾಸಿಕ ೪೨ ಸಾವಿರ ರು. ವೇತನ ನಿಗದಿಪಡಿಸಬೇಕು. ವೃದ್ಧಾಪ್ಯದಲ್ಲಿ ಗೌರವಯುತ ಜೀವನ ನಡೆಸಲು ಎಲ್ಲರಿಗೂ ಕನಿಷ್ಠ ೨೧ ಸಾವಿರ ರು. ಮಾಸಿಕ ಪಿಂಚಣಿ ನೀಡಬೇಕು. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರನ್ನು ಪೂರ್ಣ ಪ್ರಮಾಣದ ಕಾರ್ಮಿಕರೆಂದು ಗುರುತಿಸಿ ಕನಿಷ್ಠ ವೇತನ, ಪಿಎಫ್, ಇಎಸ್ಐ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ಕಲ್ಪಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಿ, ಅಲ್ಲಿಯವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಆಗ್ರಹವಾಗಿದೆ. ಇದರೊಂದಿಗೆ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಬೇಕು. ಕಾರ್ಖಾನೆಗಳು, ಗಣಿಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಾರ್ಮಿಕ ಚಳವಳಿಯನ್ನು ಅಪರಾಧೀಕರಣಗೊಳಿಸುವ ಕ್ರಮಗಳನ್ನು ನಿಲ್ಲಿಸಬೇಕು. ದೇಶದ ಜಲ, ನೆಲ ಮತ್ತು ಅರಣ್ಯ ಸಂಪತ್ತನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ತಡೆದು, ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಜೀವನ್ಮರಣದ ಪ್ರಶ್ನೆಯಾಗಿರುವ ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ. ಕಾರ್ಮಿಕರು, ನೌಕರರು ಹಾಗೂ ದುಡಿಯುವ ವರ್ಗದ ಎಲ್ಲ ವಿಭಾಗಗಳು ಡಿಸೆಂಬರ್ ೧ರಂದು ದೆಹಲಿಯಲ್ಲಿ ನಡೆಯಲಿರುವ ಸಂಸತ್ ಚಲೋ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ಮುಖಂಡರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಹಾಗೂ ಜಿಲ್ಲಾ ಖಜಾಂಚಿ ಅರವಿಂದ್, ಅಂಗನವಾಡಿ ನೌಕರರ ಸಂಘದ ಮಂಜೂಳಾ, ಪ್ರಕಾಶ್ ಶೈಲಾ ಇತರರು ಉಪಸ್ಥಿತರಿದ್ದರು.=========
ಫೋಟೋ ಪ್ಯಾನಲ್
ಪತ್ರಿಕಾಗೋಷ್ಠಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಎಸ್. ವರಲಕ್ಷ್ಮೀ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.