ಕಡಗರವಳ್ಳಿ ಗ್ರಾಮದ ಟ್ಯಾಂಕರ್ ಚಾಲಕ ವಿಶ್ವನಾಥ್ ಅವರು ಬಾಳ್ಳುಪೇಟೆಯ ಪೆಟ್ರೋಲ್ ಬಂಕ್ಗೆ ಇಂಧನ ಸಾಗಿಸಿ ಖಾಲಿ ಮಾಡಿದ ಬಳಿಕ ಬಾಡಿಗೆ ಹಣ ಪಡೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಭೂಗತ ಟ್ಯಾಂಕ್ಗೆ ಸಂಬಂಧಿಸಿದ ಸಮಸ್ಯೆ ಹಾಗೂ ಬಾಡಿಗೆ ಹಣದ ವಿಚಾರವಾಗಿ ಬಂಕ್ನ ವ್ಯವಸ್ಥಾಪಕರು ಮತ್ತು ಅವರ ಸಹಚರರು ತಮ್ಮನ್ನು ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಟ್ಯಾಂಕರ್ ಚಾಲಕ ಹೇಳಿದರು. ಬುಧವಾರದಿಂದ ಶುಕ್ರವಾರದವರೆಗೆ ಚಾಲಕನನ್ನು ಬಂಕ್ನಲ್ಲಿ ಇರಿಸಿಕೊಂಡು, ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಬಾಡಿಗೆ ಹಣವನ್ನೂ ನೀಡದೆ, ಟ್ಯಾಂಕರ್ಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಬಾಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿ ಗ್ರಾಮದ ನಯರಾ ಪೆಟ್ರೋಲ್ ಬಂಕ್ನಲ್ಲಿ ಟ್ಯಾಂಕರ್ ಚಾಲಕನನ್ನು ಕೂಡಿಹಾಕಿ ಹಲ್ಲೆ ನಡೆಸಿ ಹಿಂಸೆ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ ಕಡಗರವಳ್ಳಿ ಗ್ರಾಮದ ಟ್ಯಾಂಕರ್ ಚಾಲಕ ವಿಶ್ವನಾಥ್ ಅವರು ಬಾಳ್ಳುಪೇಟೆಯ ಪೆಟ್ರೋಲ್ ಬಂಕ್ಗೆ ಇಂಧನ ಸಾಗಿಸಿ ಖಾಲಿ ಮಾಡಿದ ಬಳಿಕ ಬಾಡಿಗೆ ಹಣ ಪಡೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಭೂಗತ ಟ್ಯಾಂಕ್ಗೆ ಸಂಬಂಧಿಸಿದ ಸಮಸ್ಯೆ ಹಾಗೂ ಬಾಡಿಗೆ ಹಣದ ವಿಚಾರವಾಗಿ ಬಂಕ್ನ ವ್ಯವಸ್ಥಾಪಕರು ಮತ್ತು ಅವರ ಸಹಚರರು ತಮ್ಮನ್ನು ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಟ್ಯಾಂಕರ್ ಚಾಲಕ ಹೇಳಿದರು. ಬುಧವಾರದಿಂದ ಶುಕ್ರವಾರದವರೆಗೆ ಚಾಲಕನನ್ನು ಬಂಕ್ನಲ್ಲಿ ಇರಿಸಿಕೊಂಡು, ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಬಾಡಿಗೆ ಹಣವನ್ನೂ ನೀಡದೆ, ಟ್ಯಾಂಕರ್ಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನಾನು ಟ್ಯಾಂಕರ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಯರಾ ಪೆಟ್ರೋಲ್ ಬಂಕ್ಗೆ ಇಂಧನ ಸಾಗಿಸಿ ಅನ್ಲೋಡ್ ಮಾಡಿದ್ದೆ. ಈ ಸಂದರ್ಭದಲ್ಲಿ ಬಂಕ್ನ ವ್ಯವಸ್ಥಾಪಕರು ಪೆಟ್ರೋಲ್ ಕಡಿಮೆ ಇದೆ ಎಂಬ ನೆಪವೊಡ್ಡಿ ಬಾಡಿಗೆ ಹಣ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಎಷ್ಟೇ ಮನವಿ ಮಾಡಿದರೂ ಬಾಡಿಗೆ ಹಣ ನೀಡದೆ ನನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಬಟ್ಟೆ ಬಿಚ್ಚಿಸಿ ಎಲ್ಲೆಂದರಲ್ಲಿ ಹೊಡೆದಿದ್ದಾರೆ. ನನ್ನ ಬಳಿಯಿದ್ದ ನಗದು ಹಣವನ್ನು ಪಡೆದುಕೊಂಡು, ಗೂಗಲ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಮನೆಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತನಿಂದ 50 ಸಾವಿರ ಹಣ ಪಡೆದಿದ್ದೆ. ಟ್ಯಾಂಕರನಲ್ಲಿದ್ದ ಹಣದ ಅದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಶುಕ್ರವಾರ ಬೆಳಿಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ನನ್ನನ್ನು ಕಳುಹಿಸಿಕೊಟ್ಟರು. ಬಳಿಕ ಮನೆಯವರಿಗೆ ವಿಷಯ ತಿಳಿಸಿ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವನಾಥ್ ಅವರ ಸಹೋದರ ಕುಮಾರಸ್ವಾಮಿ ಮಾತನಾಡಿ, ವಿಶ್ವನಾಥ್ ರಾತ್ರಿ 8.30ಕ್ಕೆ ಮನೆಗೆ ಬರುವುದಾಗಿ ಫೋನ್ ಮಾಡಿದ್ದರು. ಬಳಿಕ ರಾತ್ರಿ 11 ಗಂಟೆಗೆ ಬರುವುದಾಗಿ ತಿಳಿಸಿ, ಊಟ ಸಿದ್ಧಪಡಿಸುವಂತೆ ಹೇಳಿದ್ದರು. ಆದರೆ ಅವರು ಮನೆಗೆ ಹಿಂದಿರುಗಿರಲಿಲ್ಲ ಎಂದು ತಿಳಿಸಿದ್ದಾರೆ.ಪೆಟ್ರೋಲ್ ಬಂಕ್ನಲ್ಲಿ ವಿವಾದ ಉಂಟಾದ ಬಳಿಕ ವಿಶ್ವನಾಥ್ ಅವರ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರಿಂದ ₹9 ಸಾವಿರ ಬಾಡಿಗೆ ಹಣವನ್ನು ಪಡೆದಿದ್ದು, ಮತ್ತೊಂದು ಮೊಬೈಲ್ ಮೂಲಕ ಗೂಗಲ್ ಪೇನಲ್ಲಿ ₹9,500 ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಈ ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ. ಟ್ಯಾಂಕರ್ ಅನ್ನು ರಾತ್ರಿಯಿಡೀ ವಿವಿಧ ಕಡೆಗಳಿಗೆ ಕರೆದೊಯ್ಯಲಾಗಿದ್ದು, ಮತ್ತೊಂದು ಮನೆಯ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಕ್ಕೆ ಹಾನಿಯಾಗಿದೆ ಹಾಗೂ ಟೈರ್ ಸ್ಫೋಟಗೊಂಡಿದೆ ಎಂದು ಆರೋಪಿಸಿದ್ದಾರೆ. ಟ್ಯಾಂಕರ್ನ ಜಿಪಿಎಸ್ ವ್ಯವಸ್ಥೆಯಲ್ಲಿ ವಾಹನ ಸಂಚರಿಸಿದ ಮಾರ್ಗದ ವಿವರಗಳು ದಾಖಲಾಗಿವೆ ಎಂದಿದ್ದಾರೆ.ವಿಶ್ವನಾಥ್ ಅವರನ್ನು ಅವಮಾನಿಸಿ, ಬಟ್ಟೆ ಬಿಚ್ಚಿಸಿ ಹಿಂಸೆ ನೀಡಲಾಗಿದೆ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪೆಟ್ರೋಲ್ ಬಂಕ್ನ ಪರವಾನಗಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ತೈಲ ಸಂಸ್ಥೆಯ ಮೇಲಧಿಕಾರಿಗಳು ಪೆಟ್ರೋಲ್ ಬಂಕ್ಗೆ ಭೇಟಿ ಬಂಕ್ ಮುಚ್ಚಿಸಿದ್ದಾರೆ. ಸಂತ್ರಸ್ತ ಟ್ಯಾಂಕರ್ ಚಾಲಕನ ಪರವಾಗಿ ಟ್ಯಾಂಕರ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.