ಎಟಿಎಂ ಕತ್ತರಿಸಿ ₹23.86 ಲಕ್ಷ ಕದ್ದ ಖದೀಮರು ಬಲೆಗೆ

KannadaprabhaNewsNetwork |  
Published : Nov 01, 2026, 02:45 AM IST
 | Kannada Prabha

ಸಾರಾಂಶ

ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಲಕ್ಷಾಂತರ ರುಪಾಯಿ ದರೋಡೆ ಮಾಡಿದ್ದ ನಾಲ್ವರು ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬೀದರ್ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಲಕ್ಷಾಂತರ ರುಪಾಯಿ ದರೋಡೆ ಮಾಡಿದ್ದ ನಾಲ್ವರು ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬೀದರ್ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ.

ಅಕ್ಟೋಬರ್ 25ರ ರಾತ್ರಿ ನಡೆದಿದ್ದ ಈ ಪ್ರಕರಣವನ್ನು ವಾರದೊಳಗಾಗಿ ಭೇದಿಸಲಾಗಿದ್ದು, ಕಾರ್ಯಾಚರಣೆಯ ವಿವರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

ಎಟಿಎಂ ಯಂತ್ರದ ಎಡಭಾಗವನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಟ್ಟು ₹23.86 ಲಕ್ಷ ಹಣದ ಬಾಕ್ಸ್‌ನೊಂದಿಗೆ ಖದೀಮರು ಪರಾರಿಯಾಗಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಸ್‌ಪಿ ಪ್ರದೀಪ ಗುಂಟಿ ಹಾಗೂ ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾಂವಿ, ಹುಮನಾಬಾದ್ ಡಿವೈಎಸ್‌ಪಿ ಮಡೋಳಪ್ಪ, ಬೀದರ್ ಡಿವೈಎಸ್‌ಪಿ ಡಿ.ಎಚ್. ಮುಲ್ಲಾ ಮತ್ತು ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಎಸ್.ಎನ್. ಸನದಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಈ ತಂಡಗಳಲ್ಲಿ ಸಿಪಿಐಗಳಾದ ಅಮರೇಶ ಬಿ., ಹಣಮರೆಡ್ಡಪ್ಪ, ಶ್ರೀಕಾಂತ ಅಲ್ಲಾಪೂರೆ, ಪಿಎಸ್‌ಐಗಳಾದ ಸುದರ್ಶನರೆಡ್ಡಿ, ಪ್ರಭಾಕರ ಪಾಟೀಲ್ ಹಾಗೂ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತನಿಖೆಯ ಭಾಗವಾಗಿ ಎಐ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ತೆಲಂಗಾಣದ ಹೈದರಾಬಾದ್‌ನತ್ತ ತೆರಳಿರುವುದು ಖಚಿತವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೈದರಾಬಾದ್‌ನಲ್ಲಿ ತೀವ್ರ ನಿಗಾ ವಹಿಸಿ, ಅಕ್ಟೋಬರ್ 30 ರಂದು ಶಾಹೀನ್‌ನಗರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಆರೋಪಿಗಳನ್ನು ವಶಕ್ಕೆ ಪಡೆದರು.

ಹರಿಯಾಣ ಮೂಲದ ಅಸು ಎಂಡಿ ಶೋಹೆರಬ್ ಖಾನ್ (40), ಆಸಿಫ್ ಚೇತರಖಾನ್ (25), ಅನೀಷ್ ಇದ್ರೀಷ್ (47) ಹಾಗೂ ವೆಲ್ಡಿಂಗ್ ಕೆಲಸ ಮಾಡುವ ರಾಜಸ್ಥಾನ ಮೂಲದ ರಾಹುಲ್ ಪಾಪುಖಾನ್ (23) ಬಂಧಿತ ಆರೋಪಿಗಳಾಗಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಭಾಲ್ಕಿ ಎಟಿಎಂ ಕಳವು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ₹12 ಲಕ್ಷ ನಗದು, ₹20 ಲಕ್ಷ ಮೌಲ್ಯದ ಕ್ರೇಟಾ ಕಾರು, ಗ್ಯಾಸ್ ಮತ್ತು ಆಕ್ಸಿಜನ್ ಸಿಲಿಂಡರ್‌ಗಳು, ಕಟಿಂಗ್ ಪ್ಲೈಯರ್, ಕಬ್ಬಿಣದ ರಾಡ್‌ಗಳು, ಗ್ಯಾಸ್ ಕಟರ್ ಪೈಪ್, ಹ್ಯಾಂಡ್ ಗ್ಲೌಸ್‌ಗಳು, ಮಾಸ್ಕ್, ಬುರ್ಖಾಗಳು, 2 ಮೊಬೈಲ್ ಫೋನ್‌ಗಳು ಹಾಗೂ ದಿಕ್ಕು ತಪ್ಪಿಸಲು ಬಳಸುತ್ತಿದ್ದ 11 ವಿವಿಧ ರಾಜ್ಯಗಳ ನಂಬರ್ ಪ್ಲೇಟ್‌ಗಳು ಸೇರಿದಂತೆ ಒಟ್ಟು ₹32 ಲಕ್ಷ ಮೌಲ್ಯದ ಸೊತ್ತನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಆರೋಪಿಗಳನ್ನು ಬಂಧಿಸಿದ ತನಿಖಾ ತಂಡದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿಗಳಾದ ಬಲ್ಲಪ್ಪ ನಂದಗಾಂವಿ, ಮಡೋಳಪ್ಪ, ಎಸ್.ಎನ್. ಸನದಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಗುರುತು ಸಿಗದಂತೆ ಬುರ್ಖಾ ಬಳಸುತ್ತಿದ್ದರೆ..? ಶಂಕೆ: ಅಂತರಾಜ್ಯ ದರೋಡೆ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುವ ಬುರ್ಖಾಗಳಿಂದ, ಆರೋಪಿಗಳು ಕಳ್ಳತನದ ಸಂದರ್ಭದಲ್ಲಿ ಗುರುತು ಪತ್ತೆ ಆಗದಂತೆ ಮೂರ್ಖಗಳನ್ನು ಬಳಸುತ್ತಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ