ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸಂಘರ್ಷವು ನಿರಂತರ । ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ಕನ್ನಡಪ್ರಭ ವಾರ್ತೆ ರಾಯಚೂರು ದೇಶದಲ್ಲಿ ಬಿಜೆಪಿ ಸಾಕಷ್ಟು ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮುಂದೆ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಆಡಳಿತಕ್ಕೆ ಕೊನೆಗಾಣಿಸುವ ಉದ್ದೇಶದಿಂದಲೆಯೇ ಇಂಡಿಯಾ ಒಕ್ಕೂಟದಲ್ಲಿ ಆಮ್ ಆದ್ಮಿ ಪಾರ್ಟಿ ಭಾಗಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸಂಘರ್ಷವು ನಿರಂತರವಾಗಿರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸುವುದಕ್ಕಾಗಿಯೇ ಎಎಪಿ ಇಂಡಿಯಾ ಮೈತ್ರಿಕೂಟವನ್ನು ಸೇರಿಕೊಂಡಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಪಕ್ಷದ ಸೆಣಸಾಟ ವಿರಲಿದೆ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು. ಬಿಜೆಪಿಯನ್ನು ದೂಷಿಸಿದ್ದ ಕಾಂಗ್ರೆಸ್ ಸಹ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೋಟಿ, ಕೋಟಿ ಹಣ ಐಟಿ ದಾಳಿಯಲ್ಲಿ ಸಿಕ್ಕಿದೆ. ಇದು ಜನರ ತೆರಿಗೆ ಹಣ. ಪಂಜಾಬ್ ಸರ್ಕಾರ ಆರ್ಥಿಕವಾಗಿ ದಿವಾಳಿ ಬಗ್ಗೆ ಅಪಪ್ರಚಾರ ನಡೆದಿದೆ. ಪಂಜಾಬ್ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು. ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿಯೇ ಮುಳುಗಿವೆ, ಹಿಂದೆ ಬಿಜೆಪಿ ಕಮಿಷನ್ ದಂಧೆ ನಡೆಸಿತ್ತು. ಇದೀಗ ಕಾಂಗ್ರೆಸ್ ಅದೇ ಹಾದಿಯಲ್ಲಿ ಸಾಗಿದೆ. ಜೆಡಿಎಸ್ ಸಹ ಅಕ್ರಮದ ಹೊರತಾಗಿಲ್ಲ. ಇಂತಹ ಪಕ್ಷಗಳಿಗಿಂತ ವಿಭಿನ್ನವಾಗಿ ಜನರಪರ ಆಡಳಿತ ನಡೆಸುವ ಪರ್ಯಾಯ ಪಕ್ಷದ ಬೆಳವಣಿಗೆಯ ಅಗತ್ಯವಿದೆ. ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬ್‌ನಲ್ಲಿ ಆಧಿಕಾರದಲ್ಲಿದ್ದು ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಿದೆ. ನಾವು ನೀಡಿದ ಮಾದರಿಯಲ್ಲೆ ಉಚಿತ ಯೋಜನೆ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಚುನಾವಣೆ ಮುಂಚೆ ನೀಡಿದ ಭರವಸೆಯಂತೆ ನಡೆಯಬೇಕು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ಜನರ ಬೇಡಿಕೆ ಈಡೇರಿಸಿಲ್ಲ ನಾವು ಭಿನ್ನವಾಗಿ ಜನರ ಕಷ್ಟ ಆಲಿಸುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರುದ್ರಯ್ಯ ನವಲಿ ಹಿರೇಮಠ, ನುಸ್ರತ ಅಲಿ, ಅರ್ಜುನಪ್ಪ, ಡಿ.ವೀರೇಶ, ಜಗದೀಶ, ಭೀಮರಾಯ ನಾಯಕ ಜರದಬಂಡಿ ಇದ್ದರು. ಕಾವೇರಿ ವಿವಾದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ
ಕಾವೇರಿ ಜಲ ವಿವಾದದ ಕುರಿತು ನಿರ್ಣಯ ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕು. ತಮಿಳುನಾಡು ಸರ್ಕಾರ ಹಾಗೂ ಅಲ್ಲಿರುವ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕರ್ನಾಟಕ ನೀರು ಬಿಡಲೇಬೇಕೆಂಬ ನಿರ್ಣಯ ಕೈಗೊಂಡ ರೀತಿಯಲ್ಲಿಯೇ ರಾಜ್ಯ ಸರ್ಕಾರವು ಕಾವೇರಿ ನದಿ ನೀರನ್ನು ನಮ್ಮ ರೈತರು ಬೆಳೆದ ಬೆಳೆಗೆ ನೀರಿನ ಅವಶ್ಯಕತೆಯಿರುವುದರಿಂದ ನೀರನ್ನು ಬಿಡುವುದಿಲ್ಲವೆಂಬ ತೀರ್ಮಾನಕ್ಕೆ ಬರಬೇಕು ಎಂದು ಚಂದ್ರು ಒತ್ತಾಯಿಸಿದರು.
ರಾಯಚೂರು ಜಿಲ್ಲೆ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ:ರಾಜ್ಯಕ್ಕೆ ಅನ್ನ, ಚಿನ್ನ, ಬೆಳಕು ನೀಡುವ ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಾ ಬರುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಕುತಂತ್ರ ರಾಜಕೀಯದಿಂದಾಗಿ ಐಐಟಿಯನ್ನು ಕಿತ್ತುಗೊಂಡವರು ಏಮ್ಸ್ ವಿಚಾರದಲ್ಲಿ ಅನ್ಯಾಯವನ್ನು ಯಾವುದೇ ಕಾರಣಕ್ಕು ಮಾಡಬಾರದು. ಈ ಭಾಗದ ನೀರಾವರಿ ವಿಚಾರದಲ್ಲಿಯೂ ಆಡಳಿತ ನಡೆಸಿದ ಸರ್ಕಾರಗಳು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು ತುಂಗಭದ್ರಾ ಹೂಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.