ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗ ಹೋರಾಟ ಸಮಿತಿ ಸಮಾಲೋಚನೆ ಸಭೆ
ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗಕ್ಕೆ ಒತ್ತಾಯಿಸಿ ಮಾಡುವ ಹೋರಾಟದಲ್ಲಿ ಎಲ್ಲರೂ ಒಂದೆ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಅನೇಕ ಹೋರಾಟಗಳ ಫಲವಾಗಿ ಈಗ ಕುಷ್ಟಗಿ ಪಟ್ಟಣಕ್ಕೆ ಗದಗ ವಾಡಿ ರೈಲ್ವೆ ಮಾರ್ಗ ಆಗಿದೆ. ಇನ್ನೂ ಎರಡು ತಿಂಗಳನಲ್ಲಿ ರೈಲು ಬರಬಹುದು. ಅದರ ಜತೆಗೆ ನಮ್ಮ ಭಾಗದ ಅಭಿವೃದ್ಧಿಗಾಗಿ ಮತ್ತೊಂದು ರೈಲು ಮಾರ್ಗದ ಆವಶ್ಯಕತೆ ಇದೆ. ಈಗಾಗಲೇ ನರಗುಂದ ಭಾಗದವರು ಹೋರಾಟ ಪ್ರಾರಂಭ ಮಾಡಿದ್ದಾರೆ. ಅವರ ಜತೆಗೆ ಕೈಜೋಡಿಸಿ ಹೋರಾಟ ಮಾಡೋಣ ಎಂದರು.
ರೈಲ್ವೆ ಹೋರಾಟ ಸಮಿತಿ ಮುಖ್ಯಸ್ಥ ವೀರೇಶ ಬಂಗಾರಶೆಟ್ಟರ ಮಾತನಾಡಿ, ನಮ್ಮ ಭಾಗದ ಅಭಿವೃದ್ಧಿಗಾಗಿ ಮತ್ತೊಂದು ರೈಲ್ವೆ ಮಾರ್ಗದ ಅವಶ್ಯಕತೆ ಇದೆ. ಕುಷ್ಟಗಿ ತಾಲೂಕಿನ ಎಲ್ಲ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಾತನಾಡಿ, ನಮ್ಮ ಕುಷ್ಟಗಿ ಭಾಗದ ಅಭಿವೃದ್ಧಿಗೆ ಹೋರಾಟ ಅತ್ಯಗತ್ಯ. ಹಿಂದೆಯೂ ಕುಷ್ಟಗಿ ಪಟ್ಟಣಕ್ಕೆ ಹೆದ್ದಾರಿ ಹಾಗೂ ಕೃಷ್ಣಾ ಬಿ ಸ್ಕೀಂನ್ನು ಹೋರಾಟದ ಮೂಲಕ ಪಡೆದುಕೊಂಡಿದ್ದೇವೆ ಎಂದರು.
ವಸಂತ ಮೇಲಿನಮನಿ, ಶರಣಪ್ಪ ವಡಗೇರಿ, ಟಿ. ಬಸವರಾಜ, ಕಲ್ಲೇಶ ತಾಳದ, ಬಸವರಾಜ ಹಳ್ಳೂರು ಮಾತನಾಡಿದರು. ಮಹಾಂತಯ್ಯ ಹಿರೇಮಠ, ನಜೀರ್‌ಸಾಬ್ ಮೂಲಿಮನಿ, ಎಸ್.ಎಚ್. ಹಿರೇಮಠ, ನಬಿಸಾಬ್ ಕುಷ್ಟಗಿ, ಮಹಾಂತೇಶ ಕಲಬಾವಿ, ಡಾ. ರವಿಕುಮಾರ ದಾನಿ, ಮಹಾಂತಯ್ಯ ಅರಳೇಲಿಮಠ, ಬಸವರಾಜ ಗಾಣಿಗೇರ, ಕಿರಣಜ್ಯೋತಿ ಹಾಗೂ ನರಗುಂದ ಹೊರಾಟ ಸಮಿತಿಯ ಪದಾಧಿಕಾರಿಗಳಾದ ಜ್ಯೋತಿಬಾ, ಮಾರುತಿ ಬೋಸಲೆ, ಶಿವಯೋಗಿ ಬೆಂಡಗೇರಿ ಇದ್ದರು.