ಕನ್ನಡಪ್ರಭ ವಾರ್ತೆ ಕಾರವಾರ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಈ ಸಮೀಕ್ಷೆಗಾಗಿ ಮನೆಗಳಿಗೆ ಗಣತಿದಾರರು ಬರುವವರೆಗೆ ಕಾಯದೇ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಯಂ ಘೋಷಣೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವರ್ಚುವಲ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣತಿದಾರರು ತಮ್ಮ ಮನೆ ಬಾಗಿಲಿಗೆ ಬರುವವರೆಗೆ ನಿರೀಕ್ಷಿಸದೇ https://kscbcselfdeclaration.karnataka.gov.in/ ನಲ್ಲಿ ತಮ್ಮ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು self declaration ಮೂಲಕ ಮಾಡಿಕೊಳ್ಳುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ಪ್ರಮುಖವಾಗಿ ಹೆಚ್ಚು ಸಿಬ್ಬಂದಿ ಹೊಂದಿರುವ ಪೊಲೀಸ್, ಆರೋಗ್ಯ. ಶಿಕ್ಷಣ, ಜಿಪಂ ಮುಂತಾದ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.ಆನ್‌ಲೈನ್ ಲಿಂಕ್ ಬಳಸಿ ಸಮೀಕ್ಷೆಯಲ್ಲಿ ಭಾಗವಹಿಸುವ ಕುರಿತ ಪ್ರಕ್ರಿಯೆಗಳ ಪ್ರಾತ್ಯಕ್ಷಿಕೆಯ ವಿವರಗಳನ್ನು ಹಾಗೂ ಲಿಂಕ್ ಅನ್ನು ಎಲ್ಲಾ ಅಧಿಕಾರಿಗಳಿಗೆ ನೀಡಿದ ಅವರು, ಈ ವಿಧಾನವು ಅತ್ಯಂತ ಸುಲಭವಾಗಿದ್ದು , ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ದಾಖಲೆಗಳನ್ನು ಸಿದ್ದವಾಗಿಟ್ಟುಕೊಂಡು ಗರಿಷ್ಠ 15 ನಿಮಿಷಗಳ ಒಳಗೆ ತಮ್ಮ ಕುಟುಂಬದ ಸಮೀಕ್ಷೆಯನ್ನು ಸ್ವಯಂ ಆಗಿ ಮಾಡಿಕೊಳ್ಳಬಹುದಾಗಿದೆ. ಮುಂದಿನ 2 ದಿನಗಳು ರಜೆ ಇದ್ದು, ಅಧಿಕಾರಿ, ಸಿಬ್ಬಂದಿ ಬಿಡುವಿನ ಅವಧಿಯಲ್ಲಿ ತಮ್ಮ ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಆ. 3 ರಂದು ಎಲ್ಲಾ ಇಲಾಖೆಗಳು ಇದರ ಪ್ರಗತಿಯ ಕುರಿತಂತೆ ವರದಿ ಸಲ್ಲಿಸಬೇಕು ಎಂದರು.
ಸಾರ್ವಜನಿಕರೂ ಕೂಡಾ ಆನ್‌ಲೈನ್ ಲಿಂಕ್ ಬಳಸಿ ಈ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಪ್ರತಿಯೊಬ್ಬರೂ ಸಹಕರಿಸುವಂತೆ ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಇದ್ದರು.