ಕನ್ನಡಪ್ರಭ ವಾರ್ತೆ ತುಮಕೂರುವಿದ್ಯಾರ್ಥಿ ದಿಸೆಯಲ್ಲಿಯೇ ರಾಜಕಾರಣ ಪ್ರವೇಶಿಸಿ, ಕಾಲೇಜಿಗೆ ಹೋಗಿದ್ದಕ್ಕಿಂತ, ಹೋರಾಟಗಳಲ್ಲಿ ಭಾಗವಹಿಸಿದ್ದೇ ಹೆಚ್ಚು. ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕನಾಗಿ ಕೆಲಸ ಆರಂಭಿಸಿದ್ದು, ಇಂದು ನನ್ನನ್ನು ಈ ಮಟ್ಟಕ್ಕೆತಂದು ನಿಲ್ಲಿಸಿದೆ ಎಂದು ನೂತನ ವಿಧಾನಪರಿಷತ್ ಸದಸ್ಯ ರಮೇಶ ಬಾಬು ತಿಳಿಸಿದ್ದಾರೆ.ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಹಿರಿಯರ ಸಹಕಾರದಿಂದ ಎರಡನೇ ಬಾರಿಗೆ ವಿಧಾನ ಪರಿಷತ್‌ಗೆ ನೇಮಕಗೊಂಡಿದ್ದೇನೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ವಿಧಾನ ಪರಿಷತ್ ಒಳಗೆ ಹಾಗೂ ಹೊರಗೆ ಪಕ್ಷಕ್ಕೆ ಸಿದ್ದಾಂತವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತೇನೆ ಎಂದರು. ಪಕ್ಷ ನಮಗೆ ತಾಯಿ ಇದ್ದಂತೆ. ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂಬುದೇ ಹೆಮ್ಮೆಯ ವಿಚಾರ. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಎಂದಿಗೂ ಸೋಲಾಗಿಲ್ಲ. ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಅಧಿಕಾರ ಸಿಗುತ್ತೆ ಎಂಬುದಕ್ಕೆ ನಾನೇ ಉದಾಹರಣೆ. ನಿಮ್ಮೆಲ್ಲರ ನಂಬಿಕೆಗೆ ಚ್ಯುತಿ ತರದಂತೆ, ಪಕ್ಷವನ್ನು ಕಟ್ಟಿ ಬೆಳೆಸಲು ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ರಮೇಶಬಾಬು ನಮ್ಮ ಜಿಲ್ಲೆಯವರು, ಹಾಗಾಗಿ ಅವರಿಗೆ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದೇವೆ. ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಸಿಗುತ್ತದೆ ಎಂಬುದಕ್ಕೆ ರಮೇಶಬಾಬು ಸಾಕ್ಷಿ. ಪಕ್ಷದ ವಕ್ತಾರರಾಗಿ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು. ಪಕ್ಷ ಅವರ ಸೇವೆಯನ್ನು ಗುರುತಿಸಿ ಎಂ.ಎಲ್.ಸಿಯಾಗಿ ನೇಮಕ ಮಾಡಿದೆ.ನಿಷ್ಠಾವಂತರಿಗೆ ಅಧಿಕಾರ ಸಿಗುತ್ತದೆ. ಹಾಗಾಗಿ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವಂತೆ ಮನವಿ ಮಾಡಿದರು. ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ರಮೇಶಬಾಬು ಸರಳ, ಸಜ್ಜನಿಕೆಗೆ ಹೆಸರಾದವರು. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದವರನ್ನು ಪಕ್ಷಕೈಬಿಟ್ಟಿ ಎಂಬುದಕ್ಕೆ ಇಂದಿನ ಅಭಿನಂದನಾ ಸಮಾರಂಭ ಸಾಕ್ಷಿಯಾಗಿದೆ ಎಂದರುಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ನೂತನ ವಿಧಾನಪರಿಷತ್ ಸದಸ್ಯರಾದ ರಮೇಶಬಾಬು ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಹಾಗಾಗಿಯೇ ಅವರಿಗೆ ಅಧಿಕಾರ ದೊರೆತಿದೆ. ಪಕ್ಷ ಅಧಿಕಾರದಲ್ಲಿದ್ದರೆ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತದೆ ಎಂಬುದಕ್ಕೆ ರಮೇಶಬಾಬು ಅವರು ಎಂ.ಎಲ್.ಸಿ ಆಗಿರುವುದೇ ಸಾಕ್ಷಿ ಎಂದರು.ಕಾರ್ಯಕ್ರಮದಲ್ಲಿ ಹಿರಿಯರಾದ ಕೆಂಚಮಾರಯ್ಯ,ಇಕ್ಬಾಲ್ ಅಹಮದ್, ಆರ್.ರಾಮಕೃಷ್ಣ, ನಾರಾಯಣಮೂರ್ತಿ, ಶೆಟ್ಟಾಳಯ್ಯ, ಸುಜಾತ, ಮಹೇಶ್, ಸೂರ್ಯಮುಕುಂದರಾಜು, ಮಹಾಲಿಂಗೇಶ್,ಫಯಾಜ್, ಅನಿಲ್, ಇನಾಯತ್, ಷಣ್ಮುಖಪ್ಪ, ಅಂಬರೀಷ್, ನಟರಾಜಶೆಟ್ಟಿ, ವೈ.ಎನ್.ನಾಗರಾಜು,ಶ್ರೀನಿವಾಸಮೂರ್ತಿ, ಯೋಶೋಧಮ್ಮ, ಲಕ್ಷ್ಮಿದೇವಮ್ಮ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.