ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಣ್ವ ಮಠದ ಪೀಠಾಧಿಪತಿ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಗಳು ಚಾತುರ್ಮಾಸ್ಯ ನಿಮಿತ್ತ ಶನಿವಾರ ಸಂಸ್ಥಾನ ಪೂಜೆ ನಂತರ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಭಕ್ತಿ, ಶ್ರದ್ಧೆ, ನಿಷ್ಠೆಗಳಿಂದ ತಲೆಬಾಗಿ ನಮಸ್ಕರಿಸಿ ಸೇವೆಗೆ ಮುಂದಾಗುವುದು ಅನುಗ್ರಹಕ್ಕೆ ಪಾತ್ರರಾಗುವ ಮಹಾಕಾರ್ಯವಾಗಿದೆ ಎಂದು ಕಣ್ವಮಠ ಮೂಲ ಸಂಸ್ಥಾನ ಮಠದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳು ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಸ್ಥಾನ ಪೂಜೆ ನಂತರ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದ ಶ್ರೀಗಳು, ಗುರುಗಳ ದರ್ಶನ, ಪಾದಪೂಜೆ ಹಾಗೂ ಪಾದೋದಕ ಹಾಗೂ ಪಾದಧೂಳಗಳಿಂದ ದೇಹ ಶುದ್ಧಿಗೊಳ್ಳುವುದು. ಇಂತಹ ವೈಭವೋತ್ಸವ 45 ದಿನಗಳಲ್ಲಿ ನಡೆಯುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ ಮಹಾ ಸ್ಥಳವೇ ಇಂದ್ರಲೋಕದಂತೆ ಕಂಗೊಳಿಸುತ್ತದೆ ಎಂಬುದರ ಕುರಿತು ಬಹುಮಾರ್ಮಿಕವಾಗಿ ವಿವರಿಸಿದ ಶ್ರೀಗಳು, ಶ್ರೀ ಸತ್ಯಾತ್ಮರು ಕಲಿಯುಗವನ್ನು ಧರ್ಮಯುಗವನ್ನಾಗಿ ಪರಿವರ್ತಿಸಲು ಮಹಾ ಮಹಿಮರಾಗಿದ್ದಾರೆ. ಭಕ್ತಿ ಜ್ಞಾನ ಶ್ರದ್ಧೆ, ಜಪ-ತಪ, ಶುದ್ಧಿ, ಉಪವಾಸಗಳ ಸಾಗರ, ವೈರಾಗ್ಯಮೂರ್ತಿ, ಭಕ್ತರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸನ್ಮಾರ್ಗಕ್ಕೆ ಕೊಂಡ್ಯೊಯ್ದುದ್ದರ ಕುರಿತು ವಿವರಿಸಿದರು. ಚಾತುರ್ಮಾಸ್ಯ ಆಚರಣೆ ಮಾಡುವುದರಿಂದ ದೊರೆಯುವ ಲಾಭದ ಕುರಿತು ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳಿಂದ ಸಂಸ್ಥಾನ ಪೂಜೆ ನಡೆಯಿತು. ಮುಖ್ಯಮಂತ್ರಿ ಆಪ್ತವಲಯದ ಅಧಿಕಾರಿ ಕೃಷ್ಣಕುಮಾರ, ಪುರುಷೋತ್ತಮ, ವಿನಯಕುಮಾರ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 45 ದಿನಗಳ ಕಾಲ ವ್ಯವಸ್ಥಿತವಾಗಿ ನಡೆಯಲಿರುವ ಈ ಚಾತುರ್ಮಾಸ್ಯ ಕಾರ್ಯಕ್ರಮ ಪ್ರತಿಯೊಂದು ಕಾರ್ಯಗಳಿಗೆ ತಾವೂ ಕೂಡ ತನುಮನಧನದಿಂದ ಸಹಾಯಹಸ್ತ ಮಾಡುವುದಾಗಿ ತಿಳಿಸಿ, ಮಕ್ಕಳಿಗಾಗಿ ಸರ್ಕಾರದಿಂದ ಬೇಕಾದ ಸೌಲಭ್ಯಗಳ ಕುರಿತು ಗಮನಕ್ಕೆ ತಂದರೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.