2025-26 ನೇ ಸಾಲಿನ ನಗರ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ, ಕಡೂರುಕ್ರೀಡೆಗಳಲ್ಲಿ ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆಯಿಂದ ಮನಸ್ಸು ಪ್ರಪುಲ್ಲವಾಗಿರುತ್ತದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಕೆ.ವಿ. ಕಾಲೋನಿಯ ಡಾ.ಬಿ. ಆರ್. ಅಂಬೇಡ್ಕರ್ ಸರಕಾರಿ ಶಾಲೆ, ಪುರಸಭೆ, ಶಿಕ್ಷಣ ಇಲಾಖೆ ಮತ್ತಿತರರ ಇಲಾಖೆಗಳ ಸಹಯೋಗದಲ್ಲಿ 2025-26 ನೇ ಸಾಲಿನ ನಗರ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದ ಬಿ.ಆರ್. ಅಂಬೇಡ್ಕರ್ ನಗರದ ಬಡಾವಣೆ ಇಂದು ಪ್ರತಿಷ್ಟಿತ ಬಡಾವಣೆ ಆಗಿದೆ. ಬಡ ಹಾಗು ದುಡಿವ ವರ್ಗದ ಪೋಷಕರು ಸೇರಿ ಈ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ಸಂಗತಿ. ಪುರಸಭೆ ದತ್ತು ಪಡೆದಿರುವ ಈ ಸರಕಾರಿ ಶಾಲೆ ಮಕ್ಕಳು ಮತ್ತು ಖಾಸಗಿ ಶಾಲೆ ಮಕ್ಕಳು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುದು ನೋ ಡಿದರೆ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ ಎಂದರು.ಸ್ಥಿತಿವಂತರು ಮಕ್ಕಳು ಖಾಸಗಿ ಶಾಲೆಗೆ ಬಡವರ ಮಕ್ಕಳು ಸರಕಾರಿ ಶಾಲೆಗೆ ಸೇರುತ್ತಾರೆ. ಆದರೆ ಓದುವುದರಲ್ಲಿ ಸರಕಾರಿ ಶಾಲೆಗಳ ಮಕ್ಕಳು ಓದಿ ಎತ್ತರದ ಸ್ಥಾನಕ್ಕೆ ಬೆಳೆದಿರುವುದನ್ನು ನೋಡಿದ್ದೇವೆ. ಇಂದಿನ ಕ್ರೀಡೆಯಲ್ಲಿ ಸರಕಾರಿ ಮತ್ತು ಖಾಸಗಿ ಮಕ್ಕಳು ಹೊಂದಾಣಿಕೆ ನೋಡಿದರೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಭಾಗವಹಿಸುವಿಕೆಯಿಂದ ಮನಸ್ಸು ಪ್ರಪುಲ್ಲ ವಾಗುತ್ತೆ. ಇದೇ ಅಲ್ಲದೆ ಮಕ್ಕಳು ಬೇರೆ ಬೇರೆ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಿತರೆ ಸಾಧನೆ ಮಾಡಲು ಮಾಡಲು ಸಾದ್ಯ. ಅಂಬೇಡ್ಕರ್ ನಗರದ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪೌರಕಾರ್ಮಿಕರ, ಬಡವರ ಮಕ್ಕಳು ಹೆಚ್ಚಿರುವ ಈ ಸರಕಾರಿ ಶಾಲೆಯಲ್ಲಿ ಕೈಗೊಂಡ ತೀರ್ಮಾನದಂತೆ ನಗರ ವಲಯ ಮಟ್ಟದ ಮಕ್ಕಳ ಕ್ರೀಡಾ ಕೂಟ ಆಯೋಜಿಸಲಾಗುತ್ತಿದೆ. ನಮ್ಮ ಮಕ್ಕಳು ಇತರ ಶಾಲೆಗಳ ಮಕ್ಕಳಂತೆ ಸೇರಿ ಆಟವಾಡಬೇಕೆಂಬ ಇಚ್ಚೆಇರುವ ನಿಲುವಿನಂತೆ ನಾನು ಕೂಡ ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಆಗಿದ್ದು ಪುರಸಭೆ ಕೈ ಜೋಡಿಸುವ ಮೂಲಕ ಈ ಕ್ರೀಡಾ ಕೂಟ ಆಯೋಜಿಸಲಾಗಿದೆ. ಶಾಲೆ ಆಡಳಿತ ಮಂಡಳಿಕೈ ಜೋಡಿಸುವ ಮೂಲಕ ಅತಿಥೇಯ ಶಾಲೆಯಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದೆ. ಇದಕ್ಕೆ ಜಿಲ್ಲಾ ದೌರ್ಜನ್ಯ ಸಮಿತಿ ಪದಾಧಿಕಾರಿ ಶಂಕರ್ ಅವರ ಶ್ರಮ ಹೆಚ್ಚಿದೆ. ಶಾಸಕರು ಕೂಡ ಸಹಕಾರ ನೀಡುತ್ತೇನೆ ಎಂದ್ದಿದ್ದು , ಆದರೆ ಅವರು ಹೇಳಿದಕ್ಕಿಂತ ಬಂದಿರುವುದು ನಮ್ಮ ಸೌಭಾಗ್ಯ ಎಂದರು.ಪುರಸಭೆ ಸದಸ್ಯೆ ಪದ್ಮಾ ಶಂಕರ್ ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಪಾತ್ರ ಕೂಡ ಮುಖ್ಯ. ಅದಕ್ಕಾಗಿ ಶಿಕ್ಷಕ ವರ್ಗ ಹಾಗು ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು. ಬಿಇಒ ತಿಮ್ಮಪ್ಪ ಮಾತನಾಡಿ, ಎ ವಲಯ ಮಟ್ಟದ ಈ ಕ್ರೀಡಾಕೂಟದಲ್ಲಿ 22 ಶಾಲೆಗಳು ಭಾಗವಹಿಸುತ್ತಿವೆ. ಪುರಸಭೆ, ಶಿಕ್ಷಣ ಹಾಗು ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿದ್ದು ಮಕ್ಕಳು ಓದಿಗೆ ಮಾತ್ರ ಸೀಮಿತವಾಗದೆ ಇಂತಹ ಕ್ರೀಡೆಗಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಲು ಸಾಧ್ಯ ಎಂದರು.ಪುರಸಭಾ ಸದಸ್ಯೆ ಪದ್ಮಾಶಂಕರ್ ಮಾತನಾಡಿ, ಬಡವರ ಮಕ್ಕಳು ಹೆಚ್ಚಾಗಿರುವ ಈ ಶಾಲೆಯ ಸಹಯೋಗದಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ಅಭಿನಂದನಾರ್ಹ. ಪುರಸಭೆ ಶಾಲೆ ದತ್ತು ತೆಗೆದು ಕೊಂಡು ಅಭಿವೃದ್ಧಿಗೆ ಮುಂದಾಗಿರುವುದು ಸಂತೋಷದ ವಿಷಯ ಎಂದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್, ಮಕ್ಕಳು ಪಠ್ಯದ ಜೊತೆ ಕ್ರೀಡೆಗಳಲ್ಲಿ ಭಾಗವಹಿಸಿದಲ್ಲಿ ದೇಹಕ್ಕೂ ಶಕ್ತಿ ದೊರಕುತ್ತದೆ. ಮಕ್ಕಳು ಗೆಲುವಿಗಿಂತ ಮುಖ್ಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಸೈಯ್ಯದ್ ಯಾಸೀನ್, ಮೋಹನ್, ಮನು ಮರುಗುದ್ದಿ, ಕೃಷ್ಣಪ್ಪ, ಪ್ರೇಂಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿ ಬೈರೇಗೌಡ, ಎಂ.ಬಿ.ಮಂಜುನಾಥ್, ನಾಗರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯೋಪಾಧ್ಯಾಯಿನಿ ಛಾಯಾದೇವಿ ಸೇರಿದಂತೆ ದೈಹಿಕ ಶಿಕ್ಷಕರು ವಿವಿಧ ಶಾಲೆಗೆಳ ಶಿಕ್ಷಕರು ಮತ್ತಿತರರು ಇದ್ದರು.
30ಕೆಕೆಡಿಯು2.ಕಡೂರು ಪಟ್ಟಣದ ಡಾ ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಗರ ವಲಯಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು.
.9ಕೆಕೆಡಿಯು2ಎ.ಕಡೂರಿನ ಡಾ ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಗರ ವಲಯಮಟ್ಟದ ಕ್ರೀಡಾಕೂಟದಲ್ಲಿ ಶಾಸಕ ಕೆ.ಎಸ್. ಆನಂದ್ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಕ್ರೀಡಾಪಟುಗಳನ್ನು ಪರಿಚಯಮಾಡಿಕೊಂಡರು.