ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಇದು ಡಿಜಿಟಲ್ ಯುಗ. ತಂತ್ರಜ್ಞಾನವನ್ನು ಜನಮುಖಿಯಾಗಿ ಬಳಸುವುದರೊಂದಿಗೆ ಜನರ ಸಮಸ್ಯೆಗಳನ್ನು ತಾವೇ ಗುರುತಿಸಿ ಪರಿಹಾರ ಸೂಚಿಸುವ ವಿನೂತನ ಪ್ರಯೋಗಕ್ಕೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಂದಾಗಿದ್ದಾರೆ.
ಸರ್ಕಾರಿ ಕಚೇರಿಗೆ ನೀವು ಬರಬೇಡಿ ಕಚೇರಿಯೇ ನಿಮ್ಮ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದೊಂದಿಗೆ ಹೊಸ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.ಆಂಡ್ರೈಡ್ ಮೊಬೈಲ್‌ಗಳಿಗೆ ‘ಮೊಬೈಲ್ ಕ್ಯಾಟಲಾಗ್’ ಎಂಬ ಲಿಂಕ್‌ನ್ನು ಅಳವಡಿಸಲಾಗಿದೆ. ಇದನ್ನು ಆಶಾ, ಅಂಗನವಾಡಿ, ಕೃಷಿ ಸಖಿಯರ ಮೊಬೈಲ್‌ಗಳಿಗೂ ಅಳವಡಿಸಲಾಗಿದೆ. ಇವರು ಮೊಬೈಲ್ ತೆಗೆದುಕೊಂಡು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿ ಪಂಚಾಯ್ತಿಯ ಪ್ರತಿ ಮನೆಯನ್ನೂ ಸಂಪರ್ಕಿಸುವರು.
ಮನೆಯಲ್ಲಿರುವವರ ಮತದಾರರ ಗುರುತಿನ ಚೀಟಿಯ ನಂಬರ್ ಪಡೆದುಕೊಂಡು ಅದರ ಮೂಲಕ ಆ ಮನೆಯಲ್ಲಿ ಎಷ್ಟು ಜನರಿದ್ದಾರೆ, ಹಿರಿಯರೆಷ್ಟು-ಕಿರಿಯರು ಎಷ್ಟು ಸಂಖ್ಯೆಯಲ್ಲಿದ್ದಾರೆ, ಯಾರ ಹೆಸರಿನಲ್ಲಿ ಜಮೀನು ಎಷ್ಟೆಷ್ಟಿದೆ, ಸತ್ತವರ ಹೆಸರಿನಲ್ಲಿ ಆರ್‌ಟಿಸಿ ಇದೆಯೋ, ಪೌತಿ ಖಾತೆಯಾಗಬೇಕೋ, ಯಾವ ಬೆಳೆ ಬೆಳೆಯುತ್ತಾರೆ, ಬೆಳೆ ವಿಮೆ ಮಾಡಿಸಿದ್ದಾರೆಯೇ, ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡಿದ್ದಾರೆಯೇ, ಪಿಂಚಣಿ ಪಡೆಯುತ್ತಿರುವರೋ ಇಲ್ಲವೋ, ವಾಹನ ಸಾಲ, ಇನ್ಶೂರೆನ್ಸ್ ಮಾಡಿಸಿದ್ದಾರೆ, ಜಾತಿ ದೃಢೀಕರಣ ಎಂಬಿತ್ಯಾದಿ ವಿವರಗಳೆಲ್ಲವನ್ನೂ ಸಂಗ್ರಹಿಸಿ ದಾಖಲಿಸಿಕೊಳ್ಳುವರು.ಹೀಗೆ ಮೊಬೈಲ್‌ನಲ್ಲಿ ದಾಖಲಾದ ವಿವರಗಳೆಲ್ಲವೂ ಶಾಸಕರ ಕಚೇರಿಯ ಕಂಪ್ಯೂಟರ್‌ನಲ್ಲಿ ಪ್ರತಿಯೊಂದು ಮನೆಯ ಮಾಹಿತಿಯೂ ದಾಖಲಾಗಿರುತ್ತದೆ. ಇದರಿಂದ ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಮನೆಗಳಿವೆ, ಎಷ್ಟು ಕುಟುಂಬಗಳು ವಾಸವಾಗಿವೆ. ಜನಸಂಖ್ಯೆ ಎಷ್ಟಿದೆ, ಅಲ್ಲಿನ ಬೆಳೆ ಪದ್ಧತಿ ಹೀಗೆ ಅನೇಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಲಾಗುತ್ತಿದೆ. ಆ ಎಲ್ಲಾ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯ ಪ್ರತಿಯೊಬ್ಬರು ಶಾಸಕರನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗದಿರುವ ಕಾರಣ ದರ್ಶನ್ ಪುಟ್ಟಣ್ಣಯ್ಯ ಅವರೇ ಮೊಬೈಲ್ ಆ್ಯಪ್ ಮೂಲಕ ಜನರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮಹತ್ವಾಕಾಂಕ್ಷೆಯೊಂದಿಗೆ ಒಂದು ಪಂಚಾಯ್ತಿಯಲ್ಲಿ ಒಂದು ವಾರ ಕಾಲ ನಿರಂತರವಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಯೋಜನೆಯಡಿ ಮುನ್ನಡೆದಿದ್ದಾರೆ.ಸ್ಮಶಾನ ಒತ್ತುವರಿ, ಗದ್ದೆ ಬಯಲಿನ ದಾರಿ ಸಮಸ್ಯೆ, ಪೌತಿ ಖಾತೆ, ಆರ್‌ಟಿಸಿ ಬದಲಾವಣೆ, ದುರಸ್ತು ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ ಜನರ ಕಷ್ಟ-ಸುಖಗಳನ್ನು ಮೊಬೈಲ್ ಮೂಲಕ ಅರಿತು ಪರಿಹಾರ ಸೂಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದರ್ಶನ್ ನಡೆಸುವ ಜನಸಂಪರ್ಕ ಸಭೆ ಒಂದು ದಿನಕ್ಕೆ ಮುಗಿಯುವುದಿಲ್ಲ. ಒಂದು ವಾರದಿಂದ ಹದಿನೈದು ದಿನಗಳವರೆಗೆ ಪ್ರತಿ ದಿನ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ಸುತ್ತಾಡಿ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.ಸಮಸ್ಯೆಗಳ ಅರ್ಜಿ ಸಲ್ಲಿಸಲು ಶೇ.೮೦ರಷ್ಟು ಜನರು ಹಿಂದೇಟು: ದರ್ಶನ್ಕನ್ನಡಪ್ರಭ ವಾರ್ತೆ ಮಂಡ್ಯ
ಸಮಸ್ಯೆಗಳ ಕುರಿತಂತೆ ಅರ್ಜಿ ಸಲ್ಲಿಸುವುದಕ್ಕೆ ಶೇ.೮೦ರಷ್ಟು ಮಂದಿ ಹಿಂಜರಿಯುತ್ತಾರೆ. ಶೇ.೨೦ರಷ್ಟು ಮಂದಿ ಮಾತ್ರ ಶಾಸಕರ ಕಚೇರಿ ಮತ್ತು ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರಷ್ಟೇ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ದೂರ ಮಾಡಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಸಮಸ್ಯೆ ತಿಳಿಸಿದರೂ ಅಧಿಕಾರಿಗಳಿಂದ ಪರಿಹಾರ ಸಿಗಲಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ದುದ್ದ ಗ್ರಾಮ ಪಂಚಾಯ್ತಿಯಿಂದ ಬುಧವಾರ ಆಯೋಜಿಸಲಾಗಿದ್ದ ಸರ್ಕಾರಿ ಕಚೇರಿಗಳಿಗೆ ನೀವು ಬರಬೇಡಿ ಕಚೇರಿಯೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ದುದ್ದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೧೩೧೦ ಮನೆಗಳು, ೫೮೮೦ ಜನರಿದ್ದಾರೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ.೯೦ರಷ್ಟು ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಆಪ್‌ನಲ್ಲಿ ನಮೂದಿಸಿದ್ದಾರೆ. ಉಳಿದಿರುವ ಮನೆಗಳಿಗೂ ಆದಷ್ಟು ಶೀಘ್ರವಾಗಿ ತೆರಳಿ ಸಮಸ್ಯೆಗಳನ್ನು ಅರಿಯುವಂತೆ ತಿಳಿಸಿದರು.ಅಧಿಕಾರಿಗಳಲ್ಲಿ ಅರ್ಜಿ ಕೊಟ್ಟರೆ ಮಾತ್ರ ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸಬೇಕು ಎಂಬ ಮನೋಭಾವನೆ ಇದೆ. ಇದನ್ನು ಹೋಗಲಾಡಿಸಲು ಹೊಸ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದೇವೆ, ಆ್ಯಪ್‌ನಲ್ಲಿ ಸಮಸ್ಯೆಗಳನ್ನು ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೆ ಆ್ಯಪ್ ಬಳಸಿ ತಮ್ಮ ಸಮಸ್ಯೆಗಳನ್ನು ನಮೂದಿಸಬಹುದು ಎಂದರು.
ಅಧಿಕಾರಿಗಳು ರೈತರ ಬಳಿ ಹೋಗಿ ಬೆಳೆ ಪದ್ಧತಿ ಬದಲಾವಣೆಯಿಂದ ಉಂಟಾಗುವ ಆದಾಯ ಹೆಚ್ಚಳ ಕುರಿತು ಮಾಹಿತಿ ನೀಡಬೇಕು. ಹೆಚ್ಚಾಗಿ ಗದ್ದೆಗಳಿಗೆ ಹೋಗಲು ದಾರಿ ಇಲ್ಲವೆಂದು ರೈತರು ತಿಳಿಸಿದ್ದಾರೆ. ನಕ್ಷೆಯಲ್ಲಿ ದಾರಿ ಇದ್ದು ಒತ್ತುವರಿ ಮಾಡಿದ್ದಾರೆ ತೆರವುಗೊಳಿಸಲಾಗುವುದು ಎಂದರು.ನಿಮ್ಮ ಗ್ರಾಮಗಳಲ್ಲಿ ಸ್ಮಶಾನ ಇಲ್ಲವಾದರೆ ಆರ್‌ಟಿಸಿಯಲ್ಲಿರುವ ಸರ್ಕಾರಿ ಜಾಗಗಳನ್ನು ಪರೀಶೀಲನೆ ನಡೆಸಲಾಗುವುದು, ಒಂದು ವೇಳೆ ಯಾರಾದರೂ ಸ್ಮಶಾನ ಒತ್ತುವರಿ ಮಾಡಿದ್ದರೆ ಒತ್ತುವರಿಯನ್ನು ತೆರೆವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಂಡ್ಯ ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಆನ್‌ಲೈನ್ ಮೂಲಕ ಪೌತಿ ಖಾತೆ ಮಾಡಿಸಿಕೊಳ್ಳಲು ಅನುವು ಮಾಡಿದ್ದಾರೆ, ಆನ್‌ಲೈನ್ ಪೌತಿ ಖಾತೆ ಪಡೆಯಲು ಮುಖ್ಯವಾಗಿ ವಂಶವೃಕ್ಷ, ಮರಣ ಪ್ರಮಾಣ ಪತ್ರ ನಿಮ್ಮ ಬಳಿ ಇದ್ದರೆ ಕೇವಲ ೧೫ ದಿನಗಳಲ್ಲಿ ನಿಮಗೆ ಪೌತಿ ಖಾತೆ ದೊರೆಯುತ್ತದೆ. ನಿಮ್ಮ ಜಮೀನುಗಳನ್ನು ದುರಸ್ತಿ ಮಾಡುವುದು ಈಗ ಆನ್‌ಲೈನ್ ಆಗಿದೆ ಇದನ್ನು ಸಾರ್ವಜನಿಕರು ಉಪಯೋಗಿಸಿಕೊಂಡು ಜಮೀನುಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದರು.ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಮಾತನಾಡಿ, ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಎರಡು ವಾರಗಳು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ, ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ಉದಯ್‌ಕುಮಾರ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಲೋಕೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಲಿಂಗೇಗೌಡ ಮತ್ತಿತರರಿದ್ದರು.