ಸಮಸ್ಯೆ ಅರಿವು ಇಲ್ಲದೇ ಚೊಂಬು, ಚಿಪ್ಪಿನ ಬಗ್ಗೆ ಚರ್ಚಿಸುವ ಪಕ್ಷಗಳು: ದೇವದಾಸ

KannadaprabhaNewsNetwork | Published : Apr 30, 2024 2:03 AM

ಸಾರಾಂಶ

ಅಂದು ಬ್ರಿಟಿಷರು ಹಿಂದೂ, ಮುಸ್ಲಿಂ ಎಂದು ಜನರನ್ನು ಒಡೆದು ಆಳಿದರು. ಇಂದು ಇವರು ಸಹ ಅದೇ ದಾರಿ ತುಳಿಯುತ್ತಿದ್ದಾರೆ.

ಹೂವಿನಹಡಗಲಿ: ದೇಶ ಮತ್ತು ರಾಜ್ಯದಲ್ಲಿ ನೂರಾರು ಸಮಸ್ಯೆಗಳಿದ್ದರೂ ಯಾವುದೇ ಅರಿವಿಗೆ ಬಾರದಂತೆ ವರ್ತಿಸುತ್ತಾ, ಕೇವಲ ಚೆಂಬು ಮತ್ತು ಚಿಪ್ಪಿನ ಬಗ್ಗೆ ಚರ್ಚಿಸುತ್ತಿರುವುದು ಹಾಸ್ಯಾಸ್ಪದ ಎಂದು ಎಸ್‌ಯುಸಿಐ ಪಕ್ಷ ಅಭ್ಯರ್ಥಿ ಎ.ದೇವದಾಸ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಎಸ್.ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎ.ದೇವದಾಸ್ ತಮ್ಮ ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡುತ್ತಾ ಮಾತನಾಡಿ, ಬಿಜೆಪಿ ಸೋಲಿನ ಭೀತಿಯಿಂದ ಹತಾಶೆಗೊಂಡಿದೆ. ಜನಗಳಿಗೆ ಹೊಸದಾಗಿ ಯಾವುದೇ ಹೊಸ ಸುಳ್ಳಿನ ಆಮಿಷ ಸಿಗದ ಕಾರಣ, ಜನರ ವೈಯಕ್ತಿಕ ವಿಷಯವಾದಂತಹ ಧರ್ಮವನ್ನು ಇಂದು ರಾಜಕೀಯಗೊಳಿಸುತ್ತಿದೆ. ಮೋದಿಯವರ ಈ ನಡೆ ಈ ದೇಶಕ್ಕೆ ಅಪಾಯಕಾರಿಯಾಗಿದೆ ಎಂದರು.

ಅಂದು ಬ್ರಿಟಿಷರು ಹಿಂದೂ, ಮುಸ್ಲಿಂ ಎಂದು ಜನರನ್ನು ಒಡೆದು ಆಳಿದರು. ಇಂದು ಇವರು ಸಹ ಅದೇ ದಾರಿ ತುಳಿಯುತ್ತಿದ್ದಾರೆ. ಎಲ್ಲ ಧರ್ಮದವರಿಗೂ ಹಲವಾರು ಸಮಸ್ಯೆಗಳಿವೆ. ಬಿಜೆಪಿ ಯಾವ ರೈತರ ಸಾಲ ಮನ್ನಾ ಮಾಡಿದ್ದಾರೆ, ಯಾವ ಕುಲದವರಿಗೆ ಉದ್ಯೋಗ ನೀಡಿದ್ದಾರೆ? ಎಲ್ಲ ಧರ್ಮದ ಮಹಿಳೆಯರ ಮೇಲೆ ದೌರ್ಜನ್ಯ ನೆಡೆಯುತ್ತಿದೆ. ಅವರಿಗೆ ರಕ್ಷಣೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ದೇಶದ ಕುಸ್ತಿ ಪಟುಗಳ ಮೇಲೆ ದೌರ್ಜನ್ಯ ನಡೆದಾಗ ಮೋದಿ ಮಾತನಾಡಲಿಲ್ಲ. ಇದೇನಾ ಮೋದಿಯವರಿಗೆ ಜನರ ಮೇಲಿರುವ ಕಾಳಜಿ, ಇನ್ನೊಂದೆಡೆ ಮತ್ತೆ ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ, 1991ರಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದ ನೀತಿಗಳಿಂದಾಗಿ ಇಂದಿನವರೆಗೂ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ಶ್ರೀಮಂತರ ಪಕ್ಷ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಮಸ್ಯೆಗಳಿಗೆ ಪರಿಹಾರ ಎಂದರೆ ಜನರ ಒಗ್ಗಟ್ಟು, ಹೋರಾಟದಿಂದ ಮಾತ್ರ ಸಾಧ್ಯ ಎಂದರು.

ದುಡಿಯುವ ವರ್ಗಗಳ ಜತೆಗಿದ್ದು ಹೋರಾಟ ಮಾಡುತ್ತಿರುವ ಎಸ್,ಯುಸಿಐ ಕಮ್ಯುನಿಸ್ಟ್ ಪಕ್ಷದ ಚುನಾವಣಾ ಗುರುತಾದ ಆಟೋರಿಕ್ಷಾಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗೋವಿಂದ್, ಸದಸ್ಯ ಕೋಳೂರು ಪಂಪಾಪತಿ, ಜಿ.ಮಲ್ಲಿಕಾರ್ಜುನ, ಶಿವಪುತ್ರ, ಪಾಲಾಕ್ಷ, ದಾದಾ ಪೀರ್, ಉಮೇಶ್ ಸೊಪ್ಪಿನ, ರವಿಕಿರಣ, ಜಗದೀಶ್, ಗುರಳ್ಳಿ ರಾಜ, ಪ್ರಮೋದ್, ಲಿಂಗಪ್ಪ ಇದ್ದರು.

Share this article