ಕಾರವಾರ: ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮದಿಂದ ಭಾರತೀಯ ಜನತಾ ಪಕ್ಷ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದುನಿಂತಿದೆ. ನಾವೆಲ್ಲ ಸೇರಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.
ಬಿಜೆಪಿ ಎಂದರೆ ಕೇವಲ ರಾಜಕೀಯ ಪಕ್ಷವಲ್ಲ. ಇದೊಂದು ಆಂದೋಲನ. ಈ ನಾಡಿನ, ದೇಶದ ಜನರ ನಾಡಿಮಿಡಿತ ಅರ್ಥೈಸಿಕೊಂಡು, ಹೋರಾಟ ಮಾಡುತ್ತಾ ದೇಶದೆಲ್ಲೆಡೆ ನೆಲೆ ವಿಸ್ತರಿಸಿಕೊಂಡಿದೆ. ಕಾರ್ಯಕರ್ತರೇ ಜೀವಾಳವಾಗಿರುವ ನಮ್ಮ ಪಕ್ಷಕ್ಕೆ ಒಬ್ಬೊಬ್ಬ ಕಾರ್ಯಕರ್ತರು ದೊಡ್ಡ ಶಕ್ತಿ. ಕಾರ್ಯಕರ್ತ ಮಾಡುವ ನಿಷ್ಕಾಮಕರ್ಮದಿಂದ ಭಾರತೀಯ ಜನತಾ ಪಾರ್ಟಿ ಇಂದು ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷಕ್ಕಾಗಿ ಬಲಿದಾನ ಮಾಡಿದವರನ್ನು, ಹಗಲಿರುಳು ಎನ್ನದೇ ದುಡಿದವರನ್ನು ಸ್ಮರಿಸುತ್ತಾ, ಪಕ್ಷವನ್ನು ಇನ್ನಷ್ಟು ಬಲಪಡಿಸೋಣ ಎಂದು ತಿಳಿಸಿದರು.
ಸಾಮಾನ್ಯ ಕಾರ್ಯಕರ್ತರಿಂದಲೇ ಬೃಹತ್ತಾಗಿ ಬೆಳೆದ ಬಿಜೆಪಿ ಇಂದು ದೇಶದ ಜನರಿಗೆ ನೆರಳಾಗಿದೆ. ದೇಶಕ್ಕೆ ಶಕ್ತಿ ತುಂಬುತ್ತಿದೆ. ರಾಷ್ಟ್ರ ಭಕ್ತಿಯ ಕಿಚ್ಚನ್ನು ಹೆಚ್ಚುತ್ತಿದೆ. ದೇಶದ ಯಾವುದೋ ಭಾಗದ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶವನ್ನು ಮುನ್ನಡೆಸುವ ನಾಯಕನಾಗಿ ಬೆಳೆಯಲು ಅವಕಾಶವಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಎಂದು ವಿವರಿಸಿದರು.ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರವನ್ನು ನಿರ್ಮಾಣ ಮಾಡಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿ ಸಮಸ್ತ ಹಿಂದೂಗಳ ಶತಮಾನಗಳ ಕನಸನ್ನು ನಮ್ಮ ಪಕ್ಷ ನನಸು ಮಾಡಿದೆ. ಇಂತಹ ಮಹಾನ್ ಪಕ್ಷಕ್ಕೆ ಹಗಲಿರುಳೆನ್ನದೇ ಶ್ರಮಿಸಿ ಮತ್ತಷ್ಟು ಬಲಪಡಿಸೋಣ. ಸಮಗ್ರ ಭಾರತದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಧ್ವಜಾರೋಹಣ ಮಾಡಿದರು. ಅವರು ತಮ್ಮ ನಿವಾಸದಲ್ಲೂ ಪಕ್ಷದ ಸಂಸ್ಥಾಪನಾ ದಿನ ಆಚರಿಸಿದರು.ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರುಡೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ವೈಶಾಲಿ ತಾಂಡ್ಯಲ್, ಶಿಲ್ಪಾ ನಾಯ್ಕ್, ವಿಜೇಶ ಮಡಿವಾಳ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ ತಳೇಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ನಾಯ್ಕ ಮತ್ತಿತರರು ಇದ್ದರು.