ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅಗತ್ಯ

KannadaprabhaNewsNetwork | Published : Apr 8, 2025 12:36 AM

ಸಾರಾಂಶ

ಚಾಮರಾಜನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರಿಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳ ಅಭ್ಯಾಸದಲ್ಲಿ ತೊಡಗುವುದು ಮುಖ್ಯವಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರಿಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರಲ್ಲಿ ಸಾಕಷ್ಟು ಮಂದಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕ್ರೀಡೆಯು ಆರೋಗ್ಯಕರ ಜೀವನಕ್ಕೆ ಬಹಳ ಮುಖ್ಯವಾಗಿದೆ. ಕಬಡ್ಡಿ, ಶಾಟ್‌ಪುಟ್, ಉದ್ದ ಜಿಗಿತ, ಎತ್ತರ ಜಿಗಿತದಂತಹ ಎಲ್ಲಾ ಕ್ರೀಡೆಗಳಿಗೆ ಸಾಕಷ್ಟು ಪೂರ್ವ ತಯಾರಿ ತರಬೇತಿ ಇದ್ದರೆ ಜಯಶೀಲರಾಗಬಹುದು. ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಬೇಕು ಎಂದರು.

ಜಿಲ್ಲಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈಗಾಗಲೇ ೫ ಕೋಟಿ ರು. ವೆಚ್ಚದಲ್ಲಿ ಜಿಮ್ ಇನ್ನಿತರ ಕ್ರೀಡೆಗಳಿಗೆ ಪೂರಕವಾದ ಕಾಮಗಾರಿ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ದೈಹಿಕವಾಗಿ ಸದೃಢವಾಗಿದ್ದಲ್ಲಿ ಮಾನಸಿಕವಾಗಿಯೂ ಸದೃಢರಾಗಬಹುದು. ಕ್ರೀಡಾ ಚಟುವಟಿಕೆಯಿಂದ ದೇಹ ಹಾಗೂ ಮನಸ್ಸು ಆರೋಗ್ಯಕರವಾಗಿರುತ್ತದೆ. ಹೀಗಾಗಿ ಕ್ರೀಡೆಯು ಪ್ರತಿಯೊಬ್ಬರಿಗೂ ಸ್ಪೂರ್ತಿ ಆಗಲಿ ಎಂದರು.

ತಾವೂ ಸಹ ವಿದ್ಯಾರ್ಥಿ ದೆಸೆಯಿಂದಲೇ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪದಕಗಳನ್ನು ಪಡೆದುಕೊಂಡಿದ್ದೇನೆ. ಸರ್ಕಾರಿ ನೌಕರರು ಅಧಿಕಾರಿಗಳು ಶ್ರಮವಹಿಸಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಮನಸ್ಸು ಹಗುರವಾಗಲು ಕ್ರೀಡಾಂಗಣದಲ್ಲಿ ನಡಿಗೆ, ಬಿರಸುನಡಿಗೆ, ರನ್ನಿಂಗ್, ಬ್ಯಾಡ್ಮಿಂಟನ್, ಟೆನ್ನಿಸ್ ಇನ್ನಿತರ ಕ್ರೀಡಾ ಅಭ್ಯಸಕ್ಕೆ ಸೂಕ್ತ ಏರ್ಪಾಡುಗಳನ್ನು ಕ್ರೀಡಾ ಇಲಾಖೆ ಅಧಿಕಾರಿಗಳು ಮಾಡಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಎಸ್. ಸುರೇಶ್ ಮಾತನಾಡಿ, ಇಲ್ಲಿನ ಕ್ರೀಡಾಪಟುಗಳು ಹೆಚ್ಚು ಸಾಧನೆ ಮಾಡಬೇಕು. ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಜಿಪಂ ಸಿಇಒ ಮೋನಾ ರೋತ್ ಕ್ರೀಡಾ ಜ್ಯೋತಿ ಸ್ವೀಕರಿಸಿ ಬಳಿಕ ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು. ಇದೇ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸರ್ಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಸದಸ್ಯರಾದ ಸಿ.ಜಿ.ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್. ರೇಣುಕಾದೇವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಹಿರಿಯ ಕ್ರೀಡಾಪಟು ಶ್ರೀನಿವಾಸ್ ಪ್ರಸಾದ್ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಗುರುಸ್ವಾಮಿ, ಪ್ರಸಾದ್, ಮಹೇಶ್, ಜೋಸೆಫ್ ಅಲೆಕ್ಸಾಂಡರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this article