ಪುತ್ತೂರು: ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಕುಟುಂಬ ಸಮ್ಮಿಲನ
ಕನ್ನಡಪ್ರಭ ವಾರ್ತೆ ಪುತ್ತೂರುವಾಟ್ಸಾಪ್ಗಳಿಂದ ಪಕ್ಷದ ಕಾರ್ಯಕರ್ತರಿಗೆ, ಮತದಾರರಿಗೆ ಸೂಚನೆ ಸಲಹೆಗಳನ್ನು ನೀಡಬಹುದು ಆದರೆ ವಾಟ್ಸಾಪ್‌ಗಳಿಂದಲೇ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಪಕ್ಷವನ್ನು ಕಟ್ಟಲು ಕಾರ್ಯಕರ್ತರು ಜನರ ಬಳಿಗೆ ಹೋಗಿ ಅವರ ಮನವೊಲಿಸಬೇಕು ಹಾಗೂ ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟರು.ಅವರು ಶನಿವಾರ ಪುತ್ತೂರು ಎಪಿಎಂಸಿಯಲ್ಲಿನ ರೈತಸಭಾ ಭವನದಲ್ಲಿ ಆಯೋಜಿಸಲಾದ ಕಾಂಗ್ರೆಸ್ ವಲಯ ಮತ್ತು ಬೂತ್ ಅಧ್ಯಕ್ಷರಿಗೆ ಮಾಹಿತಿ ಕಾರ್ಯಾಗಾರ ಹಾಗೂ ಕಾಂಗ್ರೆಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ರೂವಾರಿಯಾದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳೂ ಗೊತ್ತಿರುವುದು ಬೂತ್ ಹಾಗೂ ವಲಯದ ಕಾರ್ಯಕರ್ತರಿಗೆ ಮಾತ್ರ. ಹಾಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೋಚಿಂತನೆ ಬದಲಾಯಿಸಿಕೊಂಡು ಪಕ್ಷಕ್ಕೆ ಮತಗಳನ್ನು ಸೆಳೆಯುವ ಕೆಲಸ ಮಾಡಬೇಕು. ತಳಮಟ್ಟದಲ್ಲಿರುವ ಜನರ ಜತೆಗೆ ಸ್ಪಂದಿಸಬೇಕು. ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು. ಅಲ್ಲಿ ಕಾಂಗ್ರೆಸ್-ಬಿಜೆಪಿ ಎಂಬ ಭೇದ ಬೇಡ. ಪ್ರತಿಯೊಬ್ಬರಿಗೂ ಸರ್ಕಾರಗಳ ಸೌಲಭ್ಯಗಳನ್ನು ಮುಟ್ಟಿಸುವ ಮೂಲಕ ಜನರ ಪ್ರೀತಿಯನ್ನು ಗಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ.ತೌಸೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಬಿ.ಕೆ., ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ಕುಂಬ್ರ ದುರ್ಗಾಪ್ರಸಾದ್ ರೈ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮುಖಂಡರಾದ ಕೌಶಲ್‌ಪ್ರಸಾದ್ ಶೆಟ್ಟಿ, ಶಿವರಾಮ ಆಳ್ವ, ಉಲ್ಲಾಸ್ ಕೋಟ್ಯಾನ್, ಮುರಳೀಧರ ರೈ ಮಠಂತಬೆಟ್ಟು, ಶಶಿಕಿರಣ್ ನೂಜಿಬೈಲು, ಎಂ.ಬಿ ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.ಸಂಜೆ ಕಾಂಗ್ರೆಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.