ಕಲುಷಿತ ನೀರಿನಿಂದ ಹರಡಿರುವ ಸಾಂಕ್ರಾಮಿಕ ರೋಗ ಎಂಬ ಶಂಕೆ
ಬಂದಾರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಮಹಿಳೆಯೊಬ್ಬರು ಮೃತಪಟ್ಟು ಹಲವರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಶನಿವಾರ ಪರಿಸರದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಂದಾರಿನ ಮನೆಯೊಂದರಲ್ಲಿ ಆರತಕ್ಷತೆ ಸಮಾರಂಭದ ಭೋಜನ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಬಳಿಕ ಆರತಕ್ಷತೆಯಲ್ಲಿ ಭಾಗವಹಿಸದ ಮಂದಿಯಲ್ಲೂ ಈ ಲಕ್ಷಣಗಳು ಕಂಡುಬಂದಿದೆ. ಇದುವರೆಗೆ 3 ಗ್ರಾಮಗಳಲ್ಲಿ ಸುಮಾರು 27 ಮಂದಿ ಅಸ್ವಸ್ಥರಾಗಿದ್ದಾರೆ. ಹಾಗೂ ಅನೇಕರು ಹೊರರೋಗಿಗಳಾಗಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಪರಿಸರದ ಬಾವಿ, ಬೋರ್‌ವೆಲ್, ಕೆರೆಗಳು ಕಲುಷಿತಗೊಂಡಿದ್ದು ಅದರ ನೀರಿನ ಉಪಯೋಗದಿಂದ ಬಂದಿರುವ ಸಾಧ್ಯತೆ ಇದ್ದು, ಅಲ್ಲಿನ ಜಲಮೂಲಗಳ ನೀರಿನ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ. ಇದು ಪಂಚಾಯಿತಿ ನಳ್ಳಿ ನೀರಿನಿಂದ ಉಂಟಾಗಿರುವ ತೊಂದರೆ ಆಗಿರುವುದಿಲ್ಲ ಎಂದು ತಿಳಿಸಿರುವ ಡಿಎಚ್‌ಒ, ಸ್ಥಳೀಯ ಜನರಿಗೆ ಪಂಚಾಯಿತಿ ಮೂಲಕ ಮುಂದಿನ ಕೆಲವು ದಿನಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ.
ಪ್ರಕರಣದ ಕುರಿತು ಪಂಚಾಯಿತಿಯಲ್ಲಿ ಸಭೆ ನಡೆದಿದ್ದು, ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಡಿಎಚ್‌ಒ ಡಾ. ತಿಮ್ಮಯ್ಯ ಎಚ್.ಆರ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ, ಸಾಂಕ್ರಾಮಿಕ ರೋಗ ತಜ್ಞೆ ಡಾ.ಶಿಲ್ಪಾ, ಸೂಕ್ಷ್ಮಾಣು ಜೀವಿ ತಜ್ಞೆ ವೀಣಾ ವಿಜಯರಾಜ್, ಟಿಎಚ್‌ಒ ಡಾ. ಸಂಜಾತ್, ಸ್ಥಳೀಯ ವೈದ್ಯಾಧಿಕಾರಿ ಸುನಿಲ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಗುರುರಾಜ ಉಮಚಗಿ, ಸೋಮನಾಥ್, ಸಮುದಾಯ ಆರೋಗ್ಯ ಅಧಿಕಾರಿ ಲೀಲಾವತಿ, ತಾಲೂಕು ಆರೋಗ್ಯ ಪರೀಕ್ಷಾಧಿಕಾರಿ ಸುನೀತಾ ಹೆಗ್ಡೆ, ಪಂಚಾಯಿತಿ ಅಧ್ಯಕ್ಷ ದಿನೇಶ್ ಖಂಡಿಗ, ಪಿಡಿಒ ಪುರುಷೋತ್ತಮ ಜಿ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
। ಡಾ. ತಿಮ್ಮಯ್ಯ ಎಚ್.ಆರ್., ಡಿಎಚ್‌ಒ, ಜಿಲ್ಲಾ ಆಸ್ಪತ್ರೆ, ದ.ಕ.