ಧಾರಾಕಾರ ಮಳೆಗೆ ಮನೆಗಳಿಗೆ ನುಗ್ಗಿದ ನೀರು

KannadaprabhaNewsNetwork | Published : May 18, 2025 1:15 AM
Follow Us

ಸಾರಾಂಶ

ಅಮೀನಗಡ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಗುಡುಗು ಸಿಡಿಲಿನ ಧಾರಾಕಾರ ಮಳೆಗೆ ಹಳ್ಳದ ನೀರು ಮನೆಗಳಿಗೆ ನುಗ್ಗಿ, ದವಸ ಧಾನ್ಯ, ಪಾತ್ರೆಗಳು ನೀರು ಪಾಲಾಗಿದ್ದು, ಅನೇಕ ಕೋಳಿಗಳು ಮೃತಪಟ್ಟ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಗುಡುಗು ಸಿಡಿಲಿನ ಧಾರಾಕಾರ ಮಳೆಗೆ ಹಳ್ಳದ ನೀರು ಮನೆಗಳಿಗೆ ನುಗ್ಗಿ, ದವಸ ಧಾನ್ಯ, ಪಾತ್ರೆಗಳು ನೀರು ಪಾಲಾಗಿದ್ದು, ಅನೇಕ ಕೋಳಿಗಳು ಮೃತಪಟ್ಟ ಘಟನೆ ಜರುಗಿದೆ.

ಹಳ್ಳದ ನೀರಿನ ತಡೆಗೋಡೆಗಳು ಒಡೆದ ಪರಿಣಾಮ 15ನೇ ವಾರ್ಡಿನ ನೀಲಮ್ಮನ ಗುಡಿ ಹತ್ತಿರದ ಪಾಂಡಪ್ಪ ಬಡಿವಡ್ಡರ, ವೆಂಕಟರೆಡ್ಡಿ ಬಂಡಿವಡ್ಡರ, ರಾಜಮ್ಮ ಬಂಡಿವಡ್ಡರ, ಗಂಗವ್ವ ಬಂಡಿವಡ್ಡರ, ವೆಂಕಪ್ಪ ಬಂಡಿವಡ್ಡರ, ದುರ್ಗವ್ವ ಬಂಡಿವಡ್ಡರ, ನೀಲವ್ವ ಮಲ್ನಾಡದ, ನಾಗಮ್ಮ ಬದಾಮಿ ಎಂಬುವವರ 8 ಮನೆಗಳಿಗೆ ಹತ್ತಿರದಲ್ಲೇ ಇರುವ ನೀರು ನುಗ್ಗಿದೆ. ಘಟನೆಯಲ್ಲಿ 8 ಕೋಳಿಗಳು ಸತ್ತಿವೆ. ಪಟ್ಟಣ ಪಂಚಾಯತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮನೆಯೊಳಗೆ ನುಗ್ಗಿದ ನೀರನ್ನು ಯಂತ್ರಗಳ ಮೂಲಕ ಹೊರಗೆ ಹಾಕಿದರು. ಸ್ಥಳಕ್ಕೆ ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ, 15ನೇ ವಾಡಿನ ಸದಸ್ಯ ತುಕಾರಾಮ ಪವಾರ, ಯಮನಪ್ಪ ಬಂಡಿವಡ್ಡರ, ಕಂದಾಯ ನಿರೀಕ್ಷಕ ಡಿ.ಬಿ. ಯತ್ನಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸುರೇಶ ಹುದ್ದಾರ ಭೇಟಿ ನೀಡಿ ಪರಿಶೀಲಿಸಿದರು.

ಒಡೆದ ತಡೆಗೋಡೆ: ಹಳ್ಳದ ಆಚೆ ಇರುವ ಈಶ್ವರ ದೇವಸ್ಥಾನಕ್ಕೆ ಹೋಗಲು ಈಚೆಗೆ ಕಿರುಸೇತುವೆ ನಿರ್ಮಿಸಲಾಗಿತ್ತು. ಬೃಹತ್ ತಡೆಗೋಡೆ ಒಡೆದ ಪರಿಣಾಮ ಜೋರಾಗಿ ಹರಿದುಬಂದ ನೀರು ಮನೆಗಳಿಗೆ ನುಗ್ಗಿದೆ. ತಕ್ಷಣ ಕಿರುಸೇತುವೆ ಒಡೆದು ಮೊದಲಿನಂತೆ ಹಳ್ಳದ ಎರಡೂ ಬದಿ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ 15ನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯ ತುಕಾರಾಮ ಲಮಾಣಿ, ಗುತ್ತಿಗೆದಾರ ಇಸ್ಮಾಯಿಲ್ ಮುದ್ದೇಬಿಹಾಳ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ. ಕಿರುಸೇತುವೆ ಒಡೆದು ಪುನರ್ ನಿರ್ಮಿಸಿಕೊಡುತ್ತೇವೆ ಎಂದಿದ್ದಾರೆ. ಈ ಕುರಿತು ಸೋಮವಾರ ಪಟ್ಟಣ ಪಂಚಾಯತಿಯಲ್ಲಿ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದರು.