ನಿರ್ಲಕ್ಷಿಸದೇ ಚಿಕಿತ್ಸೆ ನೀಡಲು ವೈದ್ಯರು ಕ್ರಮವಹಿಸಿಕನ್ನಡಪ್ರಭ ವಾರ್ತೆ ಬಳ್ಳಾರಿ
ಗರ್ಭಿಣಿಯರಲ್ಲಿ ಪಾದಗಳ ಬಾವು ಅಪಾಯಕಾರಿಯಾಗಿದ್ದು, ಸಕಾಲಕ್ಕೆ ಅವರಿಗೆ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ವೈದ್ಯರು ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶಬಾಬು ಹೇಳಿದರು.ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಜರುಗಿದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ ಲಸಿಕೆ ಹಾಕಿಸಲು ಆಗಮಿಸಿದ ತಾಯಂದಿರು ಹಾಗೂ ಟಿಡಿ ಚುಚ್ಚುಮದ್ದು ಪಡೆಯಲು ಆಗಮಿಸಿದ ಗರ್ಭಿಣಿಯರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ಆನಂತರ ಅವರ ನಿರಂತರ ನಿಗಾವಣೆಯಲ್ಲಿರಿಸಬೇಕು. ಒಂದು ವೇಳೆ ರಕ್ತದೊತ್ತಡ ಪರೀಕ್ಷೆ ಕೈಗೊಂಡ ಆನಂತರ ಕಂಡುಬರುವ ವ್ಯತ್ಯಾಸವನ್ನು ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಬೇಕು ಎಂದರು.ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಿಂದ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೆ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು ಎಂದು ಸೂಚಿಸಿದರು.
ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನಿರೋಧ ಕುರಿತು ಆರೋಗ್ಯ ಶಿಕ್ಷಣ ನೀಡಲು ಮರೆಯಬಾರದು. ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ರೆಫರ್ ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.ರಕ್ತಹೀನತೆ ಕಂಡುಬಂದಲ್ಲಿ ಐರನ್ ಸುಕ್ರೋಸ್ 200 ಮಿಲಿ ಗ್ರಾಂ ಪ್ರತಿ ಮೂರು ದಿನಕ್ಕೊಮ್ಮೆ 5 ಇಂಜೆಕ್ಷನ್ ಕೊಡಿಸಬೇಕು. ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿ ವಾರ ಚರ್ಚಿಸಬೇಕು ಎಂದರು.
ಹೆರಿಗೆ ವಿಷಯವನ್ನು ಆದ್ಯತೆ ಇಟ್ಟುಕೊಂಡು ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆರಿಗೆಗೆ ಗರ್ಭಿಣಿ ಬಂದಾಗ ಅಗತ್ಯ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಸಬೇಕು ಎಂದು ಹೇಳಿದರು.ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ, ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರ ಮನವೊಲಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಸಮುದಾಯ ಆರೋಗ್ಯ ಅಧಿಕಾರಿ ಎರ‍್ರಿಸ್ವಾಮಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿಜಯ ಫ್ಲಾರೆನ್ಸ್, ಆರೋಗ್ಯ ನಿರೀಕ್ಷಣಾಧಿಕಾರಿ ಶ್ವೇತಾ ಉಪಸ್ಥಿತರಿದ್ದರು.