ಎಸ್.ಜಿ. ತೆಗ್ಗಿನಮನಿ

ನರಗುಂದ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಯಲು ಶೌಚ ಸಾಮಾನ್ಯವಾಗಿದೆ. ಬಹುತೇಕ ಎಲ್ಲ ಕುಟುಂಬಗಳು ಮನೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿಕೊಂಡರೂ ಉಪಯೋಗ ಮಾಡದೇ ಅವುಗಳು ಪಾಳು ಬಿದ್ದಿವೆ.

ಸಾರ್ವಜನಿಕರು ಸರ್ಕಾರದ ಅನುದಾನ ಬಳಸಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ, ಅವುಗಳನ್ನು ಬಳಕೆ ಮಾಡಿಕೊಳ್ಳದೆ ಶೌಚಕ್ಕೆ ಬಯಲಿಗೆ ಹೋಗುವುದು ಕಂಡು ಬರುತ್ತದೆ. ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರು ತಂಡೋಪ ತಂಡವಾಗಿ ಖುಲ್ಲಾ ಜಾಗೆ ಮತ್ತು ಜಮೀನುಗಳಲ್ಲಿ ಬಹಿರ್ದೆಸೆಗೆ ತೆರಳುತ್ತಾರೆ. ಸರ್ಕಾರಿ ಅನುದಾನದಲ್ಲಿ ನಿರ್ಮಿಸಿಕೊಂಡಿರುವ ಶೌಚಾಲಯಗಳಲ್ಲಿ ಕಟ್ಟಿಗೆ ಸೇರಿದಂತೆ ವಸ್ತುಗಳನ್ನು ಇಡಲು ಬಳಸುತ್ತಿದ್ದಾರೆ.

ಪ್ರಯತ್ನ ವ್ಯರ್ಥ

ಬಯಲು ಬಹಿರ್ದೆಸೆಗೆ ತೆರಳುವ ಜನರಲ್ಲಿ ಜಾಗೃತಿ ಮೂಡಿಸಲು ಪುರಸಭೆ, ತಾಪಂ, ಗ್ರಾಪಂ, ಸೇರಿದಂತೆ ಸಂಘ-ಸಂಸ್ಥಗಳ ಪದಾಧಿಕಾರಿಗಳು ಕೆಲ ದಿನಗಳ ಕಾಲ ಸೀಟಿ ಊದುವ ಅಭಿಯಾನ ಕೈಗೊಂಡಿದ್ದರು. ಈ ಮೂಲಕ ಜನರು ಬಯಲು ಬಹಿರ್ದೆಸೆಗೆ ಹೋಗುವುದರಿಂದ ಹಲವಾರು ರೋಗಗಳು ಹರಡುತ್ತವೆ. ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಶೌಚಾಲಯ ಬಳಸುವಂತೆ ತಿಳಿ ಹೇಳುವ ಪ್ರಯತ್ನ ಮಾಡಿದ್ದರು. ಆದರೂ ಜನ ಬಯಲು ಶೌಚಕ್ಕೆ ಹೋಗುವುದನ್ನು ನಿಲ್ಲಿಸುತ್ತಿಲ್ಲ ಎನ್ನುತ್ತಾರೆ ಪುರಸಭೆ, ತಾಪಂ, ಗ್ರಾಪಂ ಸಿಬ್ಬಂದಿ.


ಕಾಗದಕ್ಕೆ ಮಾತ್ರ ಸಿಮೀತ

2017ರ ಸೆಪ್ಟೆಂಬರ್ 26ರಂದು ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ನರಗುಂದ ತಾಲೂಕನ್ನು ಬಯಲು ಬಹಿರ್ದೇಸೆ ಮುಕ್ತ ಎಂದು ಘೋಷಣೆ ಮಾಡಿದ್ದರು. ಆದರೆ ಇದು ಬರಿ ಘೋಷಣೆ ಮತ್ತು ಕಾಗದಕ್ಕೆ ಸೀಮಿತವಾಗಿದೆ.

ಒಟ್ಟು ಶೌಚಾಲಯಗಳು

ಪಟ್ಟಣದ ಪುರಸಭೆ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ 5 ಸಾರ್ವಜನಿಕ ಶೌಚಾಲಯಗಳು, 26 ಸಮುದಾಯ ಶೌಚಾಲಯಗಳು, ಪುರಸಭೆ ಅನುದಾನದಲ್ಲಿ ವೈಯಕ್ತಿವಾಗಿ ನಿರ್ಮಾಣ ಮಾಡಿಕೊಂಡ 6600 ಶೌಚಾಲಯಗಳಿವೆ. ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಅನುದಾನದಲ್ಲಿ 13263 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೂ ಜನ ಈ ಶೌಚಾಲಯ ಉಪಯೋಗ ಮಾಡುವುದು ಅತೀ ಕಡಿಮೆ ಎಂದು ಹೇಳಬಹುದು.

ಈ ಹಿಂದೆ ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಎಲ್ಲ ಗ್ರಾಮೀಣ ಭಾಗದ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡಿದ್ದೇನೆ. ನರಗುಂದ ತಾಲೂಕನ್ನು ಬಹಿರ್ದೆಸೆ ಮುಕ್ತ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರನ್ನು ಕರೆಯಿಸಿ ಘೋಷಣೆ ಮಾಡಿಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ತಿಳಿಸಿದರು.ಪಟ್ಟಣ ಜನತೆಗೆ ಬಹಿರ್ದೆಸೆಗೆ ಹೋಗಲು ಅನುಕೂಲವಾಗಲೆಂದು ಸರ್ಕಾರಿ ಅನುದಾನದಲ್ಲಿ ಸಾಮಾಜಿಕ ಮತ್ತು ಸಮುದಾಯ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸಲಾಗಿದೆ ಎಂದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಹೇಳಿದರು.

ಸರ್ಕಾರ ಗ್ರಾಮೀಣ ಭಾಗದವರ ಆರೋಗ್ಯದ ದೃಷ್ಟಿಯಿಂದ ಶೌಚಾಲಯಕ್ಕೆ ಹೆಚ್ಚಿನ ಅನುದಾನ ನೀಡುತ್ತದೆ. ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಮತ್ತು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದುತಾಪಂ ಅಧಿಕಾರಿ ಶ್ರೀಧರ ಚಿನಗುಂಡಿ ಮಾಹಿತಿ ನೀಡಿದರು.