ಪ್ರತಿ ಟನ್‌ ಕಬ್ಬಿಗೆ ₹3600 ದರ ನಿಗದಿಗೆ ರೈತರೊಂದಿಗೆ ಸುದೀರ್ಘ ಸಂಧಾನ ನಡೆಸಿ, ಹೋರಾಟದ ಬಿಸಿಯನ್ನೂ ಎದುರಿಸಿದ್ದ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಈಗ ತಾವೇ ಹೆಚ್ಚು ದರ ನೀಡಲು ಪೈಪೋಟಿಗೆ ಇಳಿದಿವೆ.

ಶ್ರೀಶೈಲ ಮಠದ

 ಬೆಳಗಾವಿ : ಪ್ರತಿ ಟನ್‌ ಕಬ್ಬಿಗೆ ₹3600 ದರ ನಿಗದಿಗೆ ರೈತರೊಂದಿಗೆ ಸುದೀರ್ಘ ಸಂಧಾನ ನಡೆಸಿ, ಹೋರಾಟದ ಬಿಸಿಯನ್ನೂ ಎದುರಿಸಿದ್ದ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಈಗ ತಾವೇ ಹೆಚ್ಚು ದರ ನೀಡಲು ಪೈಪೋಟಿಗೆ ಇಳಿದಿವೆ. ಈಗ ಪ್ರತಿ ಟನ್‌ಗೆ ₹4000ಕ್ಕೂ ಅಧಿಕ ದರ ಘೋಷಿಸುತ್ತಿವೆ.

ರೈತರ ಬೇಡಿಕೆಗೆ ಸ್ಪಂದಿಸಲು ಹಿಂದೇಟು ಹಾಕಿದ್ದ ಕಾರ್ಖಾನೆಗಳು

2 ತಿಂಗಳ ಹಿಂದೆ ರೈತರ ಬೇಡಿಕೆಗೆ ಸ್ಪಂದಿಸಲು ಹಿಂದೇಟು ಹಾಕಿದ್ದ ಕಾರ್ಖಾನೆಗಳು ಇದೀಗ ಕಬ್ಬು ಪೂರೈಕೆಗೆ ಪೈಪೋಟಿಗೆ ಇಳಿದಿರುವುದು ಗಡಿಭಾಗದ ಕಬ್ಬು ಬೆಳೆಗಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಜತೆಗೆ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಗೂ ಸಾಕ್ಷಿಯಾಗಿದೆ. ರೈತರ ಹೋರಾಟ, ಮಹಾರಾಷ್ಟ್ರದ ಕಾರ್ಖಾನೆಗಳ ಹೆಚ್ಚಿನ ದರ ಹಾಗೂ ಕಬ್ಬಿನ ಕೊರತೆಯ ಆತಂಕದಿಂದ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ನಡುವೆ ದರ ಸಮರ ಆರಂಭವಾಗಿದೆ.

ನಿಪ್ಪಾಣಿ ತಾಲೂಕಿನ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ಒಟ್ಟು ₹4270 ದರ ನೀಡುವುದಾಗಿ ಘೋಷಿಸಿದೆ. ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಪ್ರತಿ ಟನ್‌ಗೆ ₹4200 ದರ, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್ ಲಿಮಿಟೆಡ್ ₹4000, ಉಗಾರ ಸಕ್ಕರೆ ಕಾರ್ಖಾನೆ ₹4000 ಹಾಗೂ ಚಿಕ್ಕೋಡಿ ತಾಲೂಕಿನ ಜೈನಾಪುರದ ಅರಿಹಂತ ಸಕ್ಕರೆ ಕಾರ್ಖಾನೆ ಕೂಡ ಪ್ರತಿ ಟನ್‌ಗೆ ₹4000 ದರ ಘೋಷಿಸಿವೆ.

ಮೊದಲ ಕಂತಿನಲ್ಲಿ ₹3770

ಮೊದಲ ಕಂತಿನಲ್ಲಿ ₹3770, ಹಂಗಾಮು ಮುಕ್ತಾಯದ ಬಳಿಕ ಸಕ್ಕರೆ ಇಳುವರಿ ಶೇ.11.50ಕ್ಕಿಂತ ಹೆಚ್ಚಾದರೆ ₹100 ಹಾಗೂ ಸಕ್ಕರೆಯ ಮಾರುಕಟ್ಟೆ ದರ ಕೆಜಿಗೆ ₹55 ಇದ್ದಲ್ಲಿ ಹೆಚ್ಚುವರಿಯಾಗಿ ₹400 ಪಾವತಿಸುವುದಾಗಿ ತಿಳಿಸಿದೆ. ಈ ಮೂಲಕ ಕರ್ನಾಟಕದಲ್ಲೇ ಅತ್ಯಧಿಕ ದರ ಘೋಷಿಸಿದ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.