ಕನ್ನಡಪ್ರಭ ವಾರ್ತೆ ಚಿಕ್ಕೋಡಿಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿ-ಪಟ್ಟಣಕುಡಿ ಪ್ರದೇಶದಲ್ಲಿ ಜಿ 2 ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯದ ಮೊದಲ ಹಂತದ 800 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಶುಕ್ರವಾರ ಲಕ್ಕಿ ಡ್ರಾ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿ-ಪಟ್ಟಣಕುಡಿ ಪ್ರದೇಶದಲ್ಲಿ ಜಿ+2 ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯದ ಮೊದಲ ಹಂತದ 800 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಶುಕ್ರವಾರ ಲಕ್ಕಿ ಡ್ರಾ ಆಯೋಜಿಸಲಾಗಿದೆ.

ನಿಪ್ಪಾಣಿಯ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಆಶ್ರಯ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಲಕ್ಕಿ ಡ್ರಾ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಶಶಿಕಲಾ ಜೊಲ್ಲೆ ಅವರ ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಚಾಲನೆ ಪಡೆದ ಈ ಬೃಹತ್ ವಸತಿ ಯೋಜನೆ ಇದೀಗ ಅಂತಿಮ ಹಂತ ತಲುಪಿದೆ. ಯೋಜನೆಯಡಿ ಒಟ್ಟು 1,812 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಸುಮಾರು 800 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಬಡ ಹಾಗೂ ಅರ್ಹ ಕುಟುಂಬಗಳಿಗೆ ಸ್ವಂತ ಮನೆಯ ಸೌಲಭ್ಯ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆಯಡಿ ನಿಗದಿಪಡಿಸಿದ ನಾಲ್ಕು ಕಂತುಗಳ ಹಣ ಪಾವತಿಸಿರುವ ಅರ್ಜಿದಾರರ ಅರ್ಹತೆಯನ್ನು ಆಶ್ರಯ ಸಮಿತಿ ಪರಿಶೀಲಿಸಿದೆ. ಸರ್ಕಾರದ ನಿಯಮಾವಳಿ ಹಾಗೂ ಫಲಾನುಭವಿಗಳು ಸಲ್ಲಿಸಿರುವ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಪ್ರಥಮ ಹಂತದಲ್ಲಿ ಅರ್ಹತೆ ಪಡೆದ 800 ಫಲಾನುಭವಿಗಳಿಗೆ ಲಕ್ಕಿ ಡ್ರಾ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಸಾಮಾನ್ಯ ಕುಟುಂಬಕ್ಕೂ ಸ್ವಂತ ಸೂರಿನ ಆಸರೆ ಕಲ್ಪಿಸಬೇಕು ಎಂಬುದು ನನ್ನ ಆಶಯ. ಈ ಯೋಜನೆಯ ಮೂಲಕ ಅನೇಕ ಕುಟುಂಬಗಳ ಸ್ವಂತ ಮನೆಯ ಕನಸು ನನಸಾಗುತ್ತಿರುವುದು ಸಂತಸದ ಸಂಗತಿ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.