ಭಟ್ಕಳ: ತಾಲೂಕಿನ ಪಡುಶಿರಾಲಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿಪ್ಪಿಕಲ್ಲು ತೆಗೆಯಲು ನದಿಗೆ ಹೋಗಿ ಮೃತಪಟ್ಟಿದ್ದ 11 ಜನರ ಸಂತ್ರಸ್ತ ಮಕ್ಕಳನ್ನು ಭೇಟಿಯಾದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಅವರಿಗೆ ಪಾಠೋಪಕರಣ ಹಾಗೂ ಇತರ ಅಗತ್ಯ ಸಾಮಗ್ರಿ ನೀಡಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕಾರ್ಯ ಮಾಡಿದರು.
ಸಂತ್ರಸ್ತ ಮಕ್ಕಳಿಗೆ ಬಟ್ಟೆ, ಬ್ಯಾಗು, ನೋಟ್‌ಬುಕ್, ಕಂಪಾಸ್ ಬಾಕ್ಸ್, ರೇನ್ ಕೋಟ್, ಛತ್ರಿ ಸೇರಿದಂತೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.ಈ ವೇಳೆ ಮಾತನಾಡಿದ ಕಸಪಾ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಇದೊಂದು ಕರಾಳ ಘಟನೆಯಾಗಿದ್ದು, ನೀವು ಕಳೆದುಕೊಂಡ ನಿಮ್ಮ ಪಾಲಕರನ್ನು ತಂದುಕೊಡುವ ಶಕ್ತಿ ನಮಗಿಲ್ಲ. ಅದನ್ನು ವಿಧಿಯ ಅಟ್ಟಹಾಸವೇ ಎನ್ನಬೇಕು. ನೀವೆಲ್ಲ ಆ ಶೋಕದಲ್ಲಿಯೇ ಈಗಲೂ ಇದ್ದೀರಿ ಎಂಬ ಅರಿವು ನಮಗಿದೆ. ಆದರೆ, ನಿಮ್ಮ ಮುಂದಿನ ಬದುಕನ್ನು ಇನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ನೀವು ಮಾನಸಿಕವಾಗಿ ಸಿದ್ಧರಾಗಬೇಕು. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ, ನೀವು ಆಯ್ಕೆ ಮಾಡಿಕೊಂಡ ಶಿಕ್ಷಣ ಪೂರ್ಣಗೊಳಿಸುವ ಮೂಲಕ ಬದುಕಿನ ಭದ್ರತೆಗಾಗಿ ಉದ್ಯೋಗ ಕಂಡುಕೊಳ್ಳಬೇಕಾಗಿದೆ. ಆ ಮೂಲಕ ಕಳೆದುಕೊಂಡ ಪಾಲಕರ ಆತ್ಮಕ್ಕೆ ಶಾಂತಿ ನೀಡಬೇಕು ಎಂದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಸಾಹಿತಿಗಳಾದ ಶಂಭು ಹೆಗಡೆ, ಶ್ರೀಧರ ಶೇಟ್, ಜಿಲ್ಲಾ ಪದಾಧಿಕಾರಿ ಪಿ.ಎಂ. ಮುಕ್ರಿ, ಪತ್ರಕರ್ತರಾದ ವಿಷ್ಣು ದೇವಡಿಗ, ಅಕ್ಷಯಗಿರಿ ಗೋಸಾವಿ, ಮಂಜುನಾಥ ಅಂಬಿಗೇರ, ವಾಸು ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ನಾಯ್ಕ ಮತ್ತು ವಿದ್ಯಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.