ಸವಣೂರು: ಪಕ್ಷ ಸಂಘಟನೆಯ ಬಲವೇ ರಾಜಕೀಯ ಬಲ. ಕಾರ್ಯಕರ್ತರ ದುಡಿಮೆಗೆ ತಕ್ಕ ಗೌರವ ಕೊಡಲು ಮತ್ತು ಜನಸೇವೆ ಮೂಲಕ ಪಕ್ಷವನ್ನು ಬಲಪಡಿಸಲು ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ತಿಳಿಸಿದರು.ಪಟ್ಟಣದ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸಿದಲ್ಲಿ ಮಾತ್ರ ನಾವೆಲ್ಲರೂ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಯಗಳಿಸಲು ಸಾಧ್ಯ. ಆದ್ದರಿಂದ ನೂತನ ಪದಾಧಿಕಾರಿಗಳು ಬೂತ್ ಕಮಿಟಿ ರಚಿಸುವ ಮೂಲಕ ಪಕ್ಷವನ್ನು ಸಂಘಟಿಸಬೇಕು. ನಾವೆಲ್ಲರೂ ಸಂಘಟಿತರಾದಲ್ಲಿ ಮುಂಬರುವ ಚುನಾವಣೆಗಳಲ್ಲಿ ಪೈಪೋಟಿ ಒಡ್ಡಲು ಸಾಧ್ಯವಾಗಲಿದೆ. ಮುಂಬರುವ ಗ್ರಾ.ಪಂ,ತಾಪಂ ಹಾಗೂ ಪುರಸಭೆ ಚುನಾವಣೆಗಳಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ತೋರಲು ಸಾಧ್ಯ. ಪ್ರಸ್ತುತ ರಾಜ್ಯ ಸರಕಾರ ರೈತ ವಿರೋಧಿ ಸರಕಾರ, ಗ್ಯಾರಂಟಿ ಹೆಸರಲ್ಲಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಇಂತಹ ಜನವಿರೋಧಿ, ರೈತ ವಿರೋಧಿ ಸರಕಾರ ಬೇಕೆ? ಮುಂಬರುವ ಚುನಾವಣೆಯಲ್ಲಿ ಈ ಪಕ್ಷವನ್ನು ಕಿತ್ತೆಸೆದು ಎನ್.ಡಿ.ಎ ಮೈತ್ರಿಯನ್ನು ಬಲಪಡಿಸಲು ಶ್ರಮಿಸೋಣ ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಸಂಘಟನೆಯನ್ನು ಗ್ರಾಮ ಮಟ್ಟದಿಂದ ಬಲಪಡಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಆದರ್ಶಗಳನ್ನು ಕಾರ್ಯರೂಪಕ್ಕೆ ತರಲು ಬದ್ಧರಾಗಿದ್ದೇವೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವು ಕ್ಷೇತ್ರದಲ್ಲಿ ಅತ್ಯಂತ ಶಕ್ತಿ ಶಾಲಿ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.ಜಿಲ್ಲಾ ಉಪಾಧ್ಯಕ್ಷ ಮೂಖಪ್ಪ ಪಡಿಯಪ್ಪನವರ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಸಿದ್ದಪ್ಪ ಗುಡಿ ಮಲ್ಲೂರು, ರಮೇಶ್ ಮಾಗನೂರ್, ಮಲ್ಲನಗೌಡ ದೊಡ್ಡಗೌಡ್ರ, ಚನ್ನಪ್ಪ ಜಾಡರ, ಸಿದ್ದನಗೌಡ ಪಾಟೀಲ, ತಾಲೂಕು ಪ್ರಧಾನ ಕಾರ್ಯದರ್ಶಿ ಮರಿಗೌಡ ಲಕ್ಕನಗೌಡ್ರ, ಶಹರ ಘಟಕದ ಅಧ್ಯಕ್ಷ ಗಿರೀಶ್ ಸೈಬಣ್ಣವರ, ಮಹಿಳಾ ಘಟಕದ ಅಧ್ಯಕ್ಷರಾಗಿ ಮಿನಾಕ್ಷಿ ಸೊರಟೂರ್, ಪದಾಧಿಕಾರಿಗಳಾದ ಮಂಜುಳಾ ಬಡಿಗೇರ, ರೇಣುಕಾ ಬೋವಿ, ಗಡಿಗೆಪ್ಪ ಗುದಗಿ, ನಾಗರಾಜ ದೊಡ್ಡಮನಿ, ಬಸಣ್ಣ ಅಕ್ಕಿ ದೇವೆಂದ್ರಪ್ಪ ಮಲ್ಲಾರಿ, ಈರಣ್ಣ ಗೊಜನೂರ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಇತರರು ಇದ್ದರು. ಜಿಲ್ಲಾ ನಿರ್ದೇಶಕ, ಶಿವಾನಂದ ಯಲಿಗಾರ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಿಸಿದರು.