ನಿರಂತರ ಜನಸಂಪರ್ಕದಿಂದ ಮಾತ್ರ ಬಲಿಷ್ಠ ಸಂಘಟನೆ ಕಟ್ಟಲು ಸಾಧ್ಯ. ಚುನಾವಣೆ ಸಮಯದಲ್ಲಿ ಮಾತ್ರ ಜನರ ಬಳಿ ಹೋದರೆ ಬೆಂಬಲ ಸಿಗುವುದಿಲ್ಲ.
ದಾಂಡೇಲಿ: ಪಕ್ಷದ ಕಾರ್ಯಕರ್ತರು ಜನರ ಸುಖ- ದುಃಖದಲ್ಲಿ ಭಾಗಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರೊಂದಿಗೆ ಇರುವ ಸಂಪರ್ಕ ಮತ್ತು ಮಾಡಿದ ಕೆಲಸದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ನಗರದ ಮರಾಠಾ ಸಮಾಜ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಜನಸಂಪರ್ಕದಿಂದ ಮಾತ್ರ ಬಲಿಷ್ಠ ಸಂಘಟನೆ ಕಟ್ಟಲು ಸಾಧ್ಯ. ಚುನಾವಣೆ ಸಮಯದಲ್ಲಿ ಮಾತ್ರ ಜನರ ಬಳಿ ಹೋದರೆ ಬೆಂಬಲ ಸಿಗುವುದಿಲ್ಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಅವರು, ದಾಂಡೇಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು. ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪಕ್ಷಕ್ಕೆ ಶಕ್ತಿ ಬರುತ್ತದೆ. ಮುಂಬರುವ ಸ್ಥಳೀಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಸಂಘಟನೆಗೆ ಒತ್ತು ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಅವರನ್ನು ಬ್ಲಾಕ್ ಕಾಂಗ್ರೆಸ್ ಹಾಗೂ ಪಕ್ಷದ ವಿವಿಧ ವಿಭಾಗಗಳ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾರದಾ ರಾಥೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಮಹಿಳಾ ಅಧ್ಯಕ್ಷೆ ರೇಣುಕಾ ಬಂದಂ, ಪ್ರಧಾನ ಕಾರ್ಯದರ್ಶಿಗಳಾದ ಕೀರ್ತಿ ಗಾಂವಕರ ಮತ್ತು ಇಕ್ಬಾಲ್ ಶೇಖ, ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಿಯಾಜ್ ಬಾಬು ಸೈಯದ್, ಕಾಂಗ್ರೆಸ್ ಎಸ್ಸಿ/ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಕರ, ಯುವ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷ ಕರೀಂ ಗೌಸ್ ಖತೀಬ್, ಯುವ ಕಾಂಗ್ರೆಸ್ ಅಧ್ಯಕ್ಷ ಗಗನ್ ಸಿಂಗ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಗರಸಭಾ ಮಾಜಿ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.