ಶಿವಮೊಗ್ಗ: ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು, ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು. ಸಾಹಿತ್ಯದ ಮೂಲಕ ಸಂಸ್ಕೃತಿಯ ಮಹತ್ವ ಸಾರಬೆಕೆಂದು ಶಾಸಕ, ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಕರೆ ನೀಡಿದರು.
ಭಾರತೀಯ ಸಮಾಜ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಸಂಪ್ರದಾಯ, ನಂಬಿಕೆ, ಪದ್ಧತಿ ಮತ್ತು ಮೌಲ್ಯಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ವಿವಿಧ ಧರ್ಮಗಳು, ಉಪಭಾಷೆಗಳು, ಭೌಗೋಳಿಕ ಸ್ಥಳ, ಭೌಗೋಳಿಕ ಗಡಿಗಳು ಮತ್ತು ಸಾಮಾಜಿಕ ಸಾಮರಸ್ಯದ ಏಕತೆಯು ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ಆಚರಣೆಗಳಿವೆ. ವಿವಿಧ ಪ್ರದೇಶಗಳು ವಿಭಿನ್ನ ಹಬ್ಬಗಳನ್ನು ವಿಶಿಷ್ಟ ಶೈಲಿಯೊಂದಿಗೆ ಆಚರಿಸಲಾಗುತ್ತದೆ. ಅವು ಕಾಲೋಚಿತ ಪ್ರಕೃತಿಯಲ್ಲಿರುತ್ತವೆ ಮತ್ತು ಹವಾಮಾನಕ್ಕೆ ಸಂಬಂಧಿಸಿವೆ. ಯುಗಾದಿ ಕೂಡ ಇದರಲ್ಲಿ ಪ್ರಮುಖವಾದುದು ಎಂದು ತಿಳಿಸಿದರು.ಭಾರತೀಯ ಸಂಪ್ರದಾಯದಲ್ಲಿ ನಂಬಿಕೆಗಳು, ಆಚರಣೆಗಳು ಮತ್ತು ಪಾಕಪದ್ಧತಿ ಎಂಬ ಅಂಶಗಳಿವೆ. ಅದರ ಇತಿಹಾಸದೊಂದಿಗೆ ಭಾರತೀಯ ಸಂಸ್ಕೃತಿಯ ಸಾರವನ್ನು ರೂಪಿಸಲು ಸಹಾಯ ಮಾಡಿದೆ. ಭಾರತೀಯ ಸಂಪ್ರದಾಯಗಳ ನಡುವೆ ಹೆಚ್ಚಿನ ಪ್ರಮಾಣದ ವೈವಿಧ್ಯತೆ ಮತ್ತು ಸಾಮ್ಯತೆಗಳಿರುವುದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಕವಿ ಕಂಡ ಯುಗಾದಿ-2025 ಕವನ ಸಂಕಲನದ ಸಂಪಾದಕಿ, ನೃತ್ಯಗುರು ಸಹನಾ ಚೇತನ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಯುವ ಕವಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ಕವನ ಸಂಕಲನ ಹೊರತರಲಾಗಿದೆ. ಸಹಚೇತನ ನಾಟ್ಯಾಲಯವು ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಪ್ರಸಾರಿಸುವ ಕೈಂಕರ್ಯದಲ್ಲಿ ತೊಡಗಿದೆ ಎಂದರು.
ಚೇತನ್, ಡಾ.ನಾಗಮಣಿ, ಆನಂದ ರಾಮ್, ವಿನಯ್, ಉಷಾರಾಣಿ, ಮಾಲತೇಶ್, ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.