ಕೈಕೊಟ್ಟ ಪಾಸಿಂಗ್ ಪ್ಯಾಕೇಜ್, ಹುಸಿಯಾದ ನಿರೀಕ್ಷೆ!

KannadaprabhaNewsNetwork | Published : May 5, 2025 12:45 AM

ಸಾರಾಂಶ

ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕಳಪೆ ಸಾಧನೆ ತೋರಿದ ಹಲವು ಜಿಲ್ಲೆಗಳು ಪಾಸಿಂಗ್ ಪ್ಯಾಕೇಜ್ ರೂಪಿಸಿ ಅದರಂತೆ ಬೋಧನೆಯಲ್ಲಿ ತೊಡಗಿವೆ. ಅದನ್ನೇ ಧಾರವಾಡ ಜಿಲ್ಲೆಯಲ್ಲೂ ಅಳವಡಿಸಿಕೊಳ್ಳಲಾಗಿದೆ. ಅಸಲು ಸಮಸ್ಯೆ ಆರಂಭವಾಗಿದ್ದೇ ಇಲ್ಲಿಂದ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

ಮಹಮ್ಮದ ರಫೀಕ್ ಬೀ‍ಳಗಿ

ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಪಾಸಿಂಗ್ ಪ್ಯಾಕೇಜ್‌ನಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೈಕೊಟ್ಟಿದೆ. ಹೌದು, ಹೀಗಂತ ಚಿಂತಕರ ಚಾವಡಿಯಲ್ಲಿ ಚರ್ಚೆಯೊಂದು ಶುರುವಾಗಿದೆ.

ಧಾರವಾಡ ಜಿಲ್ಲೆಯಲ್ಲಿ "ಮಿಶನ್ ವಿದ್ಯಾಕಾಶಿ " ಯೋಜನೆ ಹಮ್ಮಿಕೊಂಡು ಸತತ ಪ್ರಯತ್ನ ನಡೆಸಿದರೂ ನಿರೀಕ್ಷಿತ ಫಲಿಂತಾಶ ದೊರಕಿಲ್ಲ. ಇದಕ್ಕೆ ಕಾರಣ ಪಾಸಿಂಗ್ ಪ್ಯಾಕೇಜ್ ಎನ್ನುವ ಆರೋಪ ಕೇಳಿಬರುತ್ತಿದೆ.

ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕಳಪೆ ಸಾಧನೆ ತೋರಿದ ಹಲವು ಜಿಲ್ಲೆಗಳು ಪಾಸಿಂಗ್ ಪ್ಯಾಕೇಜ್ ರೂಪಿಸಿ ಅದರಂತೆ ಬೋಧನೆಯಲ್ಲಿ ತೊಡಗಿವೆ. ಅದನ್ನೇ ಧಾರವಾಡ ಜಿಲ್ಲೆಯಲ್ಲೂ ಅಳವಡಿಸಿಕೊಳ್ಳಲಾಗಿದೆ. ಅಸಲು ಸಮಸ್ಯೆ ಆರಂಭವಾಗಿದ್ದೇ ಇಲ್ಲಿಂದ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

ಏನಿದು ಕಾರಣ?

ಪಾಸಾಗುವಷ್ಟು ಅಂಕ ಗಳಿಸಲಿ ಎಂದು ಪರೀಕ್ಷೆಯ ಉದ್ದೇಶವನ್ನಷ್ಟೇ ಇಟ್ಟುಕೊಂಡು ಶಿಕ್ಷಕರು ಪಾಠ ಹೇಳುತ್ತಿದ್ದಾರೆ. ಇದರಿಂದ ಮಕ್ಕಳಿಗೆ ವಿಷಯ ಮನನವಾಗದೇ ಅವರು ಪರೀಕ್ಷಾ ದೃಷ್ಟಿಯಿಂದ ಅಧ್ಯಯನದಲ್ಲಿ ತೊಡಗಿದ್ದಾರೆ. ಮೊದಲೇ ಶಿಕ್ಷಕರು ಇಂತಹ ಪಾಠದಲ್ಲಿ ಇಂತಹ ಪ್ರಶ್ನೆ ಬರುತ್ತದೆ ಎಂದು ಹೇಳಿ ಅದನ್ನಷ್ಟೇ ಹೇಳಿಕೊಡುವ ಮತ್ತು ಮನನ ಮಾಡಿಸುತ್ತಾರೆ. ಹೀಗಾಗಿ, ಮಕ್ಕಳೂ ಅದಕ್ಕಷ್ಟೇ ತಮ್ಮ ಅಧ್ಯಯನ ಸೀಮಿತಗೊಳಿಸುತ್ತಾರೆ. ಅಂತಹ ಪ್ರಶ್ನೆಗಳ ಉತ್ತರ ಬಾಯಿಪಾಠ ಮಾಡುತ್ತಾರೆ. ಇಷ್ಟು ಬರೆದರೆ ಪಾಸಾಗುತ್ತೇವೆ ಎನ್ನುವ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತಿದೆ. ಇದೇ ಪದ್ಧತಿ ಶಿಕ್ಷಣದಲ್ಲಿ ಅದ್ವಾನ ಸೃಷ್ಟಿಸುತ್ತಿದೆ ಎನ್ನುತ್ತಾರೆ ಶಿಕ್ಷಣತಜ್ಞರು.

ಒಂದೇ ಉತ್ತರ ಪದ್ಧತಿ: ಇತ್ತೀಚಿಗೆ ಶಿಕ್ಷಕರಲ್ಲಿ ಒಂದು ಪಾಠದಲ್ಲಿ ಯಾವುದೇ ಪ್ರಶ್ನೆ ಕೇಳಿದರೂ ಒಂದೇ ಸಿದ್ಧ ಉತ್ತರ ಕೊಡುವ ಪ್ರವೃತ್ತಿ ಬೆಳೆಸುವುದು ಕಾರಣವಾಗುತ್ತಿದೆ. ಇದರಿಂದ ಮಕ್ಕಳ ಬೌದ್ಧಿಕ ವಿಕಸನ ಕುಂಠಿತಗೊಳ್ಳುತ್ತಿದೆ. ಪಾಸಿಂಗ್ ಪ್ಯಾಕೇಜ್ ಇರಲಿ ಆದರೆ, ಪರೀಕ್ಷೆಯ ಸಮಯ ಹತ್ತಿರ ಬಂದಾಗ ಮಾತ್ರ ಆ ಕುರಿತು ಶಿಕ್ಷಕರು ಮಕ್ಕಳಿಗೆ ಹೇಳಬೇಕು. ಶಾಲಾ ಆರಂಭದಿಂದ ಪಾಠದ ಸಮಗ್ರ ಬೋಧನೆ, ಅದು ಮನದಟ್ಟಾಗುವಂತೆ ತಿಳಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.

ಪರೀಕ್ಷೆ ಅತಿಯಾಗದಿರಲಿ: ಎಸ್‌ಎಸ್‌ಎಲ್‌ಸಿ ಎಂದಾಕ್ಷಣ ಹೆಚ್ಚೆಚ್ಚು ಪರೀಕ್ಷೆ ಆಯೋಜಿಸಲಾಗುತ್ತಿದೆ. 10ನೇ ತರಗತಿ ಪ್ರವೇಶ ಮಾಡುತ್ತಲೆ ಶಾಲೆ, ಮನೆ, ಸಹಪಾಠಿಗಳು ಪರೀಕ್ಷೆಯ ಕುರಿತೇ ಮಾತನಾಡುತ್ತಾರೆ. ತಿಂಗಳಲ್ಲಿ ಒಂದೆರಡು ಪರೀಕ್ಷೆ, ಸಿದ್ಧತಾ ಪರೀಕ್ಷೆ ಎಂದು ವಿದ್ಯಾರ್ಥಿಗಳು ಇದರಿಂದಲೇ ಒತ್ತಡ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಪರೀಕ್ಷೆ ಎಂದರೆ ಮತ್ತಷ್ಟು ಭಯಬೀಳುವಂತಾಗಿದೆ.

ಫಲಿಸದ ಹೊಸ ಚಿಂತನೆ: ಧಾರವಾಡ ಜಿಲ್ಲೆಗೆ ಶೈಕ್ಷಣಿಕವಾಗಿ ಐತಿಹಾಸಿಕ ವೈಭವವನ್ನು ಮರುಕಳಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಪ್ರಸಕ್ತ ವರ್ಷದ ಶೈಕ್ಷಣಿಕ ಆರಂಭದ ದಿನಗಳಲ್ಲಿಯೇ ಶೈಕ್ಷಣಿಕ ತಜ್ಞರೊಂದಿಗೆ, ಸಂವಹನ ತಜ್ಞರೊಂದಿಗೆ ಚರ್ಚಿಸಿ, ಮಿಷನ್ ವಿದ್ಯಾಕಾಶಿ ಯೋಜನೆಯನ್ನು ಹುಟ್ಟು ಹಾಕಿದರು. ಶಿಕ್ಷಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಎಸ್‌ಡಿಎಂಸಿ ಸದಸ್ಯರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಜರುಗಿಸಿ, ಶೈಕ್ಷಣಿಕ ಸಾಧನೆಗೆ ಪ್ರೇರೇಪಿಸಿದರು. ಪ್ರತಿ ಹಂತದಲ್ಲೂ ಸ್ವತಃ ತಾವೇ ಭಾಗವಹಿಸಿ, ಎಲ್ಲರಲ್ಲೂ ಗುರಿ ಸಾಧನೆಯ ಭರವಸೆ ಮೂಡಿಸಿದರು. ಆಗಸ್ಟ್ ತಿಂಗಳಲ್ಲಿ ಬೇಸ್ ಲೈನ್ ಪರೀಕ್ಷೆ ಮಾಡಿ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಗುರುತಿಸಿ ಆಯಾ ವಿಷಯದಲ್ಲಿ ಅವರಿಗೆ ಹೆಚ್ಚಿನ ತರಬೇತಿ ನೀಡಲಾಗಿತ್ತು. ಇದರಿಂದಾಗಿ ಮಕ್ಕಳಿಗೆ ಇನ್ನಿತರ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಲಾಗಲಿಲ್ಲ ಎನ್ನುವ ದೂರು ಕೆಲವರಿಂದ ಕೇಳಿಬರುತ್ತಿದೆ.

ಪಾಲಕರಲ್ಲಿ ಕಾಳಜಿ ಹೆಚ್ಚಲಿ: ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ, ಹೇಗಿದೆ ಅಧ್ಯಯನ ಎನ್ನುವ ಕುರಿತು ಪಾಲಕರು ಇತ್ತೀಚೆಗೆ ಕಾಳಜಿ ವಹಿಸುತ್ತಿಲ್ಲ. ಉದ್ಯೋಗಸ್ಥರು ತಮ್ಮ ಮಕ್ಕಳ ಕಲಿಕೆ ಬಗೆಗೆ ಕಾಳಜಿ ವಹಿಸುತ್ತಿದ್ದರೂ ಪ್ರಮಾಣ ಕಡಿಮೆಯಾಗುತ್ತಿದೆ. ಎಲ್ಲವನ್ನೂ ಶಿಕ್ಷಕರೇ ಮಾಡಲು ಅಗಲ್ಲ, ಮನೆಯಲ್ಲೂ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಬೇಕಿದೆ ಎನ್ನುವ ಮಾತು ಕೇಳಿಬರುತ್ತಿದೆ.

ವಿದ್ಯಾಕಾಶಿ ಯೋಜನೆಯಿಂದ ಸದ್ಯ ಉತ್ತಮ ಫಲಿತಾಂಶ ಸಿಗದಿರಬಹುದು. ದೀರ್ಘಕಾಲದಲ್ಲಿ ಅದರ ಪರಿಣಾಮ ಫಲಿತಾಂಶದಲ್ಲಿ ಕಾಣಲಿದೆ. ಹೀಗಾಗಿ, ಇದನ್ನು ಹೀಗೆ ಮುಂದುವರಿಸಲಿ ಎನ್ನುವ ಮಾತು ಕೆಲವರಿಂದ ಕೇಳಿಬರುತ್ತಿದೆ.

ತರಗತಿಯಲ್ಲಿ ಟಾಪ್‌ ಬರುವ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚಿನ ತರಬೇತಿ ನೀಡುತ್ತಿರುವುದು ಒಂದರ್ಥದಲ್ಲಿ ತಪ್ಪು. ಇದು ಕಲಿಕಾ ದ್ರೋಹ ಎನಿಸಿಕೊಳ್ಳುತ್ತದೆ. ಟಾಪ್‌ ಬರುವ ಮಕ್ಕಳಿಗೆ ತರಬೇತಿ ನೀಡಲಿ. ಆದರೆ, ಅವರೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೂ ಹೆಚ್ಚಿನ ಒತ್ತು ಕೊಟ್ಟು ಅವರೂ ಹೆಚ್ಚಿನ ಅಂಕ ಪಡೆಯಲು ಶಿಕ್ಷಕರು ಸಿದ್ಧಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

Share this article