ಕೇಂದ್ರ ಸರ್ಕಾರದಿಂದ ಅವೈಜ್ಞಾನಿಕ ಕಾಯ್ದೆ ಪಾಸ್‌- ಆರೋಪ

KannadaprabhaNewsNetwork | Published : Jan 19, 2024 1:47 AM

ಸಾರಾಂಶ

ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವ ಲಾರಿ, ಟ್ರಕ್, ಆಟೋ ಸೇರಿದಂತೆ ಇನ್ನಿತರೆ ಚಾಲಕರು, ಮಾಲೀಕರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವ ಲಾರಿ, ಟ್ರಕ್, ಆಟೋ ಸೇರಿದಂತೆ ಇನ್ನಿತರೆ ಚಾಲಕರು, ಮಾಲೀಕರು ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಅಮರೇಶ ಬಂಡರಗಲ್ಲ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.8 ರಂದು ಸಂಸತ್ತಿನಲ್ಲಿ ಚಾಲಕರ ವಿರುದ್ಧ ಅವೈಜ್ಞಾನಿಕವಾದ ಕಾಯ್ದೆಯನ್ನು ಪಾಸ್ ಮಾಡಿದ್ದಾರೆ. ಚಾಲಕ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿದ್ದು ಅಪಘಾತ ಮಾಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬೇಕು. ಯಾವುದೇ ಕಾರಣಕ್ಕೆ ಮಾಹಿತಿ ನೀಡದೇ ಘಟನಾ ಸ್ಥಳದಿಂದ ಪರಾರಿ ಆಗುವಂತಿಲ್ಲ ಒಂದು ವೇಳೆ ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಚಾಲಕನಿಗೆ 10 ವರ್ಷ ಜೈಲು, ₹7 ಲಕ್ಷ ದಂಡ ವಿಧಿಸುವ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದರು.

ಅಪಘಾತವಾದ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ಒಂದು ವೇಳೆ ಆ ಸಂದರ್ಭದಲ್ಲಿ ಚಾಲಕ ಜನರ ಕೈಗೆ ಸಿಕ್ಕರೆ, ಹತ್ಯೆಯಾಗಿರುವ ಮತ್ತು ಹತ್ಯೆಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇದೊಂದು ಚಾಲಕ ವಿರೋಧಿ ಕಾನೂನು ಆಗಲಿದೆ ಎಂದು ದೂರಿದರು.

ಲಾರಿ ಚಾಲಕ ರವಿ ಕರಂಡಿ ಮಾತನಾಡಿ, ಯಾವ ಚಾಲಕನೂ ಬೇಕೆಂದೇ ಅಪಘಾತ ಮಾಡುವುದಿಲ್ಲ. ಆಕಸ್ಮಿಕವಾಗಿ ಘಟಿಸುವ ಅಪಘಾತಕ್ಕೆ ಈಗಾಗಲೇ ಹಲವು ಕಾನೂನುಗಳಿದ್ದು, ಅದರ ಅಡಿಯಲ್ಲಿಯೇ ಇಷ್ಟು ವರ್ಷಗಳ ವಿಚಾರಣೆ, ತಪ್ಪು ಮಾಡಿದ್ದರೆ ನ್ಯಾಯಾಲಯ, ಪೊಲೀಸರಿಂದ ಶಿಕ್ಷೆ, ದಂಡ ವಿಧಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಹೊಸದಾಗಿ ಕಾನೂನು ಬಂದರೆ ಲಾರಿ, ಟ್ರಕ್, ಬಸ್, ಕಾರು, ಆಟೋ ಸೇರಿದಂತೆ ಯಾವ ವಾಹನಗಳಿಗೂ ಚಾಲಕರೇ ಸಿಗದಂತಾಗುತ್ತದೆ ಎಂದರು.

ಜತೆಗೆ ಇದು ಸ್ವಂತ ವಾಹನ ಇಟ್ಟುಕೊಂಡವರಿಗೂ ಅನ್ವಯ ಆಗುತ್ತದೆ. ಆದ್ದರಿಂದ ಜನರಿಗೆ ತೊಂದರೆ ಆಗುವ ಈ ವಿಧೇಯಕವನ್ನು ಸರ್ಕಾರ ವಾಪಸ್ ಪಡೆಯಬೇಕು. ಇಲ್ಲವಾದರೆ ದೇಶಾದ್ಯಂತ ಹೀಗೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಗೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಬೆಂಬಲ ನೀಡಿ ಮಾತನಾಡಿದರು. ನಂತರ ತಹಸೀಲ್ದಾರ ಕಚೇರಿ ತೆರಳಿ ತಹಸೀಲ್ದಾರ ನಿಂಗಪ್ಪ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಚಾಲಕರಾದ ಪ್ರಕಾಶ ಸಿಂಧೆ, ರಜಾಕ್ ರಶ್ಮೀ, ರವಿ ಹೂಲಗೇರಿ, ಐ.ಎನ್.ಟೆಂಗಿನಕಾಯಿ, ಮಹಬೂಬ ಮಾನ್ವಿ, ಯುಸಿಫ್ ಭಾವಿಕಟ್ಟಿ, ರಫೀಕ್ ಭಾವಿಕಟ್ಟಿ, ಲಾಲ್‌ಸಾಬ ಗಡೇದ, ಮಹಾಂತೇಶ ಗೌಡರ, ಭಾಷಾ ಭಾವಿಕಟ್ಟಿ, ರಫೀಕ್ ಭಾವಿಕಟ್ಟಿ, ಯಮನೂರ ಹೊಸಮನಿ, ಸಮೀರ ಸುತಗುಂಡರ ಸೇರಿದಂತೆ ಇತರರು ಇದ್ದರು.

Share this article