ಲಕ್ಷ್ಮೇಶ್ವರದಲ್ಲಿ ಅರೆ ಸೇನಾ ಪಡೆಯಿಂದ ಪಥಸಂಚಲನ

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಅರೆ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಶನಿವಾರ ಪಥ ಸಂಚಲನ ನಡೆಸಲಾಯಿತು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಅರೆ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಶನಿವಾರ ಪಥ ಸಂಚಲನ ನಡೆಸಲಾಯಿತು.ಈ ವೇಳೆ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ ಪಟ್ಟಣದಲ್ಲಿ ರ್‍ಯಾಪಿಡ್‌ ಆ್ಯಕ್ಷನ್ ಫೋರ್ಸ್‌ ಪಡೆ, ಪೊಲೀಸ್‌ ಸಿಬ್ಬಂದಿಗಳಿಂದ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವುದು ನಮ್ಮ ಉದ್ದೇಶವಾಗಿದೆ. ಭದ್ರಾವತಿಯಲ್ಲಿನ 97ನೇ ಬಟಾಲಿಯನ್‌

ಅರೆ ಸೇನಾ ಪಡೆಯ ಸಿಬ್ಬಂದಿಗಳ ಜೊತೆಯಲ್ಲಿ ಪಥ ಸಂಚಲನ ಮಾಡಲಾಯಿತು. ಈ ಪಥ ಸಂಚಲನ ನಡೆಸುವುದರ ಹಿಂದೆ ಯಾವುದೇ ಉದ್ದೇಶವಿಲ್ಲ, ದಕ್ಷಿಣ ಭಾರತದ ಕೇರಳ, ಗೋವಾ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅರೆ ಸೇನಾಪಡೆಗಳು ಪಥ ಸಂಚಲನ ನಡೆಸಲಾಗುತ್ತದೆ. ಗದಗ ಜಿಲ್ಲೆಯಲ್ಲಿ ಜ 25ರ ವರೆಗೆ ವಿವಿಧ ಪಟ್ಟಣದ ಪ್ರದೇಶಗಳಲ್ಲಿ ಪಥ ಸಂಚಲನ ಮಾಡುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ತಹಸೀಲ್ದಾರ್‌ ವಾಸುದೇವ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಎಚ್ಚರಿಕೆ ನೀಡುವ ಉದ್ದೇಶದಿಂದ ಇಂತಹ ಪಥ ಸಂಚಲನ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಪಥ ಸಂಚಲನ ಮಾಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ರ್‍ಯಾಪಿಡ್ ಆ್ಯಕ್ಷನ್ ಫೋರ್ಸನ ಮುಖ್ಯಸ್ಥ ಬಿ.ಸಿ. ರಾಯ್ ಮಾತನಾಡಿ, ನಾವು ಪೊಲೀಸರೊಂದಿಗೆ ಸೇರಿ ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಪಥ ಸಂಚಲನ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಸಮಾಜದಲ್ಲಿ ಕೋಮು ಗಲಭೆ, ಸೌಹಾರ್ದತೆ ಕದಡುವ ಜನರಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ವಿ.ಜಿ. ಪವಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಪೇಂದ್ರ ಸಿಂಗ್‌ ಸೇರಿದಂತೆ 100 ಕ್ಕೂ ಹೆಚ್ಚು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

Share this article