ಜಿಲ್ಲಾಸ್ಪತ್ರೆ ನೂತನ ಕಟ್ಟಡಕ್ಕೆ ಹೊರ ರೋಗಿ ವಿಭಾಗ ಸ್ಥಳಾಂತರ

KannadaprabhaNewsNetwork |  
Published : Jul 29, 2024, 12:46 AM IST
ಚಿತ್ರ :  28ಎಂಡಿಕೆ3 : ಹೊರ ರೋಗಿಗಳ ವಿಭಾಗದ ನೂತನ ಕಟ್ಟದಲ್ಲಿ ಭಾನುವಾರ ಪೂಜಾ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು 300 ಹಾಸಿಗೆಯ ಆಸ್ಪತ್ರೆ ಒಳಗೊಂಡಿದೆ. ಆ ನಿಟ್ಟಿನಲ್ಲಿ 60 ಕೋಟಿ ರು. ಸರ್ಕಾರದಿಂದ ಬಿಡುಗಡೆಯಾಗಲಿದೆ ಎಂದು ಶಾಸಕ ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಆರೋಗ್ಯ ಸೌಲಭ್ಯಗಳು ಆಸ್ಪತ್ರೆಯ ಹಳೆ ಕಟ್ಟಡದಿಂದ ನೂತನ ಕಟ್ಟಡಕ್ಕೆ ಭಾನುವಾರ ಸ್ಥಳಾಂತರವಾಗಿದೆ.

ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಇತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರ ರೋಗಿಗಳ ವಿಭಾಗದ ಸ್ಥಳಾಂತರಕ್ಕೆ ಚಾಲನೆ ನೀಡಿದರು.

ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿರುವ ಹೊರ ರೋಗಿಗಳ ವಿಭಾಗದ ಜನರಲ್ ಮೆಡಿಸನ್, ಕಣ್ಣು, ಕಿವಿ-ಮೂಗು-ಗಂಟಲು, ಕೀಲು ಮತ್ತು ಮೂಳೆ, ಮಾನಸಿಕ ರೋಗ, ಶ್ವಾಸಕೋಶ ಮತ್ತು ಚರ್ಮ ರೋಗ ವಿಭಾಗಗಳಿಗೆ ಶಾಸಕ ಡಾ. ಮಂತರ್‌ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಪ್ರತ್ಯೇಕವಾಗಿ ಭೇಟಿ ನೀಡಿ ವೀಕ್ಷಿಸಿದರು.

ಅಲ್ಲಿನ ‘ಡಿ’ ದರ್ಜೆ ನೌಕರರು, ಶೂಶ್ರುಷಕರು, ಸಿಬ್ಬಂದಿ, ವೈದ್ಯರ ಜೊತೆ ಸಮಲೋಚಿಸಿದ ಶಾಸಕರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು, ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು, ರೋಗಿಗಳನ್ನು ಕುಟುಂಬದವರಂತೆ ಕಾಣಬೇಕು ಎಂದು ಸಲಹೆ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರತಿಯೊಬ್ಬರೂ ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ಉತ್ತಮ ಹೆಸರು ಪಡೆಯಬಹುದು. ಅ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಬಳಿಕ ಮಂತರ್‌ ಗೌಡ ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಹೊರ ರೋಗಿಗಳ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒ.ಪಿ.ಡಿ ವಿಭಾಗವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಭಾನುವಾರ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು 300 ಹಾಸಿಗೆಯ ಆಸ್ಪತ್ರೆ ಒಳಗೊಂಡಿದೆ. ಈ ಕಟ್ಟಡದಲ್ಲಿ ಎರಡು ಮಹಡಿ ಪೂರ್ಣಗೊಳ್ಳಬೇಕಿದೆ, ಆ ನಿಟ್ಟಿನಲ್ಲಿ ಸರ್ಕಾರದಿಂದ 60 ಕೋಟಿ ರು. ಬಿಡುಗಡೆಯಾಗಲಿದ್ದು, ಉತ್ತಮ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು.

ಹೊಸ ಕಟ್ಟಡದಲ್ಲಿ ಈ ವರ್ಷವೇ ಹೃದ್ರೋಗ ವಿಭಾಗ ಆರಂಭವಾಗಲಿದೆ, ಈ ಸಂಬಂಧ ನೂತನ ಕಟ್ಟಡದಲ್ಲಿ ಜಾಗ ಕಾಯ್ದಿರಿಸಲಾಗಿದ್ದು, ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ ಎಂದು ಶಾಸಕ ಮಂತರ್ ಗೌಡ ವಿವರಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ವಿಶಾಲ್ ಕುಮಾರ್, ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ, ಸ್ಥಾನಿಕ ವೈದ್ಯಾಧಿಕಾರಿ ಡಾ ಸತೀಶ್, ಡಾ. ರೂಪೇಶ್ ಗೋಪಾಲ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾನೆಹಿತ್ಲು ಮೊಣ್ಣಪ್ಪ, ಚಂದ್ರಶೇಖರ್, ಪ್ರಮುಖರಾದ ಚುಮ್ಮಿ ದೇವಯ್ಯ, ತೆನ್ನೀರ ಮೈನ, ಜಾನ್ಸನ್, ಜುಲೇಕಾಬಿ, ಲೀಲಾ ಶೇಷಮ್ಮ, ಸುರೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ