ರೋಗಿಗಳೂ ಹೀಗೆಲ್ಲ ಕೇಳ್ತಾರೆ... ನಾವೂ ನಗ್ತಾ ಉತ್ತರಿಸುತ್ತೇವೆ...: ವೈದ್ಯ ಡಾ. ಕೃಷ್ಣ ಗೋಖಲೆ

KannadaprabhaNewsNetwork | Published : Jul 1, 2025 12:47 AM

ಕೆಲವೊಂದು ಅಥವಾ ಬಹಳಷ್ಟು ರೋಗಿಗಳ ಕುತೂಹಲಕರ ಪ್ರಶ್ನೆಗಳು ನಮ್ಮನ್ನು ಪ್ರತಿದಿನ ದಂಗುಬಡಿಸುವುದರೊಂದಿಗೆ ನಗುವನ್ನೂ ತರಿಸುತ್ತವೆ... ವೈದ್ಯರ ದಿನದ ಹಿನ್ನೆಲೆಯಲ್ಲಿ ವೃತ್ತಿ ಬದುಕಿನ ಸ್ವಾರಸ್ಯಗಳನ್ನು ವೈದ್ಯ ಡಾ. ಕೃಷ್ಣ ಗೋಖಲೆ ಮೆಲುಕು ಹಾಕಿದ್ದಾರೆ.

ಇಂದು ವೈದ್ಯರ ದಿನಾಚರಣೆ ಪ್ರಯುಕ್ತ ವಿಶೇಷ ಬರಹ

ವೃತ್ತಿಯಲ್ಲಿ ಮೇಲು ಕೀಳು ಎಂಬುದಿಲ್ಲ... ಎಲ್ಲ ವೃತ್ತಿಗಳಿಗೂ ಅದರದ್ದೇ ಆದ ಗೌರವ, ಕೆಲವು ಲಿಖಿತ/ ಅಲಿಖಿತ ನಿಯಮಗಳು ಇದ್ದೇ ಇರುತ್ತವೆ. ಆದರೆ ಈಗಿನ ದಿನಗಳಲ್ಲಿ ಬಹಳಷ್ಟು ಜನರಿಗೆ ವೈದ್ಯರ ಮೇಲೆ ಪೂರ್ಣ ನಂಬಿಕೆಯಿಲ್ಲ. ನಿತ್ಯ ರೋಗಿಗಳು ನಮ್ಮಲ್ಲಿ ಕೇಳುವ ಪ್ರಶ್ನೆಗಳಿಂದಲೇ ಅವು ವೇದ್ಯವಾಗುತ್ತವೆ. ನಾವು ಸಣ್ಣವರಿದ್ದಾಗ ಬಾಟಲಿಯಲ್ಲಿ ವೈದ್ಯರು ನೀಡಿದ ಕೆಂಪು ದ್ರಾವಣವನ್ನೇ ಅಮೃತವೆಂದು ಕಣ್ಣುಮುಚ್ವಿ ಕುಡಿದು ಎಲ್ಲಾ ಸಣ್ಣ ಪುಟ್ಟ ರೋಗಗಳನ್ನು ವಾಸಿಮಾಡಿಕೊಂಡವರು. ಬಹುಶಃ ಇಲ್ಲಿ ಔಷಧಿಗಿಂತ ವಿಶ್ವಾಸ ಮತ್ತು ನಂಬಿಕೆಗಳು ಹೆಚ್ಚು ಕೆಲಸ ಮಾಡಿದ್ದುವು ಎನ್ನುವುದು ನನ್ನ ನಂಬಿಕೆ.

ಕೆಲವೊಂದು ಅಥವಾ ಬಹಳಷ್ಟು ರೋಗಿಗಳ ಕುತೂಹಲಕರ ಪ್ರಶ್ನೆಗಳು ನಮ್ಮನ್ನು ಪ್ರತಿದಿನ ದಂಗುಬಡಿಸುವುದರೊಂದಿಗೆ ನಗುವನ್ನೂ ತರಿಸುತ್ತವೆ...

1) ನಿಮ್ಮ ಮದ್ದಿನಲ್ಲಿ ಗುಣ ಆಗ್ತದಾ? ಆಗ್ತದೆ ಎಂಬುದು ನನ್ನ ಉತ್ತರ. (ನಾವು ಹೇಳಿದಂತೆ ಹೇಳಿದ ಪ್ರಮಾಣದಲ್ಲಿ ತೆಗೆದುಕೊಂಡರೆ ಮಾತ್ರ ಅಂತ ನಮ್ಮ ಮನಸ್ಸಿನಲ್ಲಿ ವಿಚಾರ ಬಂದು ಹೋಗುತ್ತದೆ )...

2) ನಿಮ್ಮ ಮದ್ದು ಉಷ್ಣ ಆಗ್ತದಾ? ಉತ್ತರ: ಇಲ್ಲಾ ಸರಿಯಾಗಿ ತೆಕ್ಕೊಳ್ಳಿ..( ನೀವು ತಿನ್ನುವ ಪಿಜ್ಜಾ, ಬರ್ಗರ್, ಪಾನಿಪೂರಿ, ಟಿಕ್ಕಾ,ಕಬಾಬ್ ಬಹಳ ತಂಪಿರಬೇಕು ಅಂತ ನಮ್ಮ ಮನಸು ಹೇಳುತ್ತದೆ)...

3) ಸರ್ ಯಾಕೋ ಶುಗರ್ ಕನ್ಟ್ರೋಲ್ ಬರ್ತಾ ಇಲ್ಲಾ...! ಉತ್ತರ: ಹೌದಾ ..ಔಷಧಿ ಒಂದು ತಿಂಗಳಿಗೆ ಮಾತ್ರ ಕೊಟ್ಟಿದ್ನಲ್ಲಾ...ನೀವು ಬರದೆ ಈಗ ನಾಲ್ಕು ತಿಂಗಳು ಕಳೆಯಿತು. ‘ಇಲ್ಲಾ ಡಾಕ್ಟರ್ ಅದು ಸರಿಯಾಗಿ ತೆಕ್ಕೊಂಡಿದ್ದೇನೆ ಇನ್ನೂ ಸ್ವಲ್ಪ ಉಳಿದಿದೆ...’ ಅದು ಹೇಗೆ ಉಳಿಯಲು ಸಾಧ್ಯ!? ರೋಗಿಯ ಉತ್ತರ: ಇಲ್ಲಾ ಸರ್ ಮಧ್ಯ ಮಧ್ಯ ಮದುವೆ/ ಬರ್ತ್ ಡೇ ಪಾರ್ಟಿ/ ಮೆಹಂದಿ/ ಎಂಗೇಜ್ ಮೆಂಟ್/ ಕೋಲ/ ಬ್ರಹ್ಮಕಲಶ/ ಜಾತ್ರೆ ಎಲ್ಲಾ ಇತ್ತಲ್ವಾ ಸಾರ್ ...ಹಾಗೆ ಕೆಲವೊಮ್ಮೆ ಮದ್ದು ಕುಡಿಯೋಕೆ ಸಮಯ ಸಿಕ್ಲಿಲ್ಲಾ ...(ಇವರಿಗೆ ಕೊಟ್ಟ ಮದ್ದು ಹೀಗೆ ಅಕ್ಷಯ ಪಾತ್ರೆಯಾಗುತ್ತದೆ )...

4) ಮತ್ತೆ ಯಾರೋ ಹೇಳಿದ್ರು ಜಂಬೂ ಜ್ಯೂಸ್, ನೆಲ್ಲಿ ಜ್ಯೂಸ್, ಪಪ್ಪಾಯ ಜ್ಯೂಸ್‌ ಎಲ್ಲಾ ತೆಕ್ಕೊಂಡ್ರೆ ಕಡಿಮೆ ಆಗ್ತದೆ ಅಂತೆ ಹೇಳ್ತಾರೆ. ಜ್ಯೂಸ್‌ ತಗೊಂಡೆ ಕೂಡಾ. ಆದ್ರೂ ಶುಗರ್ ಹೈ ಇದೆ!

ಯಾರು ಹೇಳಿದ್ರು? ಎಂಬುದು ನಮ್ಮ ಪ್ರಶ್ನೆ... ಅದು ನೆಂಟರೊಬ್ಬರು ಬೆಂಗಳೂರಿಂದ ಬರುವಾಗ ನನಗಾಗಿಯೇ ಅಂತ ತೆಕ್ಕೊಂಡು ಬಂದಿದ್ರು. ಹಾಗಾದ್ರೆ ನಿಮಗೆ ಫ್ರೀ ಯಾಗಿ ಸಿಕ್ಕಿತು ಅಲ್ವಾ? ನಮ್ಮ ಪ್ರಶ್ನೆ... ‘ಹಾಗೆನಿಲ್ಲಾ ಸರ್ ..ಅದಕ್ಕೆ 12500 ಸಾವಿರ ಕೊಟ್ಟೆ. ಎಂಆರ್‌ಪಿ 20000 ಇದೆಯಂತೆ. ಪಾಪ ನಮಗಾಗಿ ಅವರು ಅಲ್ಲಿಂದ ಹೊತ್ತುಕೊಂಡು ತಂದಿದ್ದಾರೆ. (ನಮ್ಮ ಒಂದು ತಿಂಗಳ ಮದ್ದಿಗೆ 750-800 ರು. ಕನ್ಸಲ್ಟೇಶನ್‌ ಫೀಸ್‌ ಸೇರಿ ಕೊಡುವುದಕ್ಕೆ ಇವರಿಗೆ ಕಷ್ಟ ಆಗುತ್ತದೆ ಎಂಬುದು ಬೇರೆ ಸಂಗತಿ)

5) ಡಾಕ್ಟರ್ ನೀವು ಕೊಡುವ ಮದ್ದಿನಲ್ಲಿ ಸೈಡ್ ಎಫೆಕ್ಟ್ ಏನಾದ್ರೂ...?

ಇಲ್ಲಾ ಹಾಗೇನಿಲ್ಲಾ (ಇವರು ಬೇಕಾಬಿಟ್ಟಿ ಕುಡಿಯುವ ಕೂಲ್‌ ಡ್ರಿಂಕ್ಸ್‌. ಅಂಗಡಿಯಿಂದ ಯಾರನ್ನೂ ಕೇಳದೆ ಅನುದಿನ ತಿನ್ನುವ ಮಾತ್ರೆಗಳು... ಎಲ್ಲ ತಿನ್ನುವಾಗ ಈ ಪ್ರಶ್ನೆ ಯಾಕೆ ಬರುವುದಿಲ್ಲ ಅಂತ ನಮ್ಮ ಮನಸ್ಸು ಗುನುಗುನಿಸುತ್ತಿರುತ್ತದೆ..)...

ಎಲ್ಲರೂ ಹೀಗೆಯೇ ಅಂತ ಹೇಳಲಾಗದು. ನಾವು ಹೇಳಿದ ರೀತಿಯಲ್ಲೇ, ಹೇಳಿದ ಪ್ರಮಾಣದಲ್ಲಿ ಯೇ ಔಷಧೀಯನ್ನು ತೆಕ್ಕೊಳ್ಳುವವರೂ ಇದ್ದಾರೆ. ಇವರು ಬಹಳ ಬೇಗ ಗುಣಮುಖರಾಗುವುದನ್ನು ಕಂಡಿದ್ದೇವೆ ಕೂಡಾ...

ರೋಗಿಗಳ ಜೊತೆ ನಿತ್ಯ ಇಂತಹ ನೂರಾರು ಅನುಭವಗಳು. ಆದರೂ ನಾವು ಕೋಪಗೊಳ್ಳುವುದಿಲ್ಲಾ. ನಗು ನಗುತ್ತಾ ಇರುತ್ತೇವೆ. ಯಾಕೆಂದರೆ ನಾವು ವೈದ್ಯರು. ಸರ್ವೇ ಜನಾಃ ಸುಖಿನೋ ಭವಂತು/

ಸರ್ವೇ ಸಂತು ನಿರಾಮಯಃ-ಡಾ. ಕೃಷ್ಣ ಎಂ ಗೋಖಲೆ, ಆಯುರ್ವೇದ ತಜ್ಞರು ಹಾಗೂ ಅಧ್ಯಕ್ಷರು, ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಶಕ್ತಿ ನಗರ, ಮಂಗಳೂರು.