- ವೈದ್ಯರ ನೇಮಿಸಲು ಒತ್ತಾಯಿಸಿ ಪ್ರತಿಭಟನೆಯಲ್ಲಿ ರೈತ ಮುಖಂಡರ ಆಕ್ರೋಶ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ದೇವರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ದಿನಗಳಿಂದ ವೈದ್ಯರಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಶೀಘ್ರವೇ ಆಸ್ಪತ್ರೆಗೆ ವೈದ್ಯರ ನೇಮಿಸಲು ಆಗ್ರಹಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ತಾಲೂಕು ಹಸಿರು ಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ಮಾತನಾಡಿ, ದೇವರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ದೇವರಹಳ್ಳಿ ಸುತ್ತಮುತ್ತಲ 7ರಿಂದ 8 ಗ್ರಾಮಗಳು ಒಳಪಡಲಿವೆ. ಈ ಗ್ರಾಮಗಳಲ್ಲಿ ಒಟ್ಟು 7 ಸಾವಿರ ಜನಸಖ್ಯೆ ಇದೆ. ಇಲ್ಲಿರುವ ಪ್ರಾಥರ್ಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 10 ದಿನಗಳಿಂದ ವೈದ್ಯರಿಲ್ಲದೇ ರೋಗಿಗಳು ಚಿಕಿತ್ರೆ ಪರದಾಟುತ್ತಿದ್ದಾರೆ. ಕೂಡಲೇ ವೈದ್ಯರ ನೇಮಕ ಮಾಡಬೇಕು ಎಂದರು.ಈ ಭಾಗದಲ್ಲಿ ಬಡ ಮತ್ತು ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಸಣ್ಣಪುಟ್ಟ ಕಾಯಿಲೆಗಳಿಗೂ ಚನ್ನಗಿರಿ ಅಥವಾ ಸಂತೆಬೆನ್ನೂರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕೂಡಲೇ ಅಧಿಕಾರಿಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಬೇಕು ಎಂದರು.
ಪ್ರತಿಭಟನೆ ವಿಷಯ ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಮನವಿ ಆಲಿಸಿದರು. ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿದರು. ಆಗ ಜಿಲ್ಲಾ ಆರೋಗ್ಯಾಧಿಕಾರಿಗಳು ಸೋಮವಾರ ದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು. ಅನಂತರ ಪ್ರತಿಭಟನೆ ಕೈ ಬಿಡಲಾಯಿತು.ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಗಂಟೆಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಾಹನಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಓಂಕಾರಪ್ಪ, ದೇವರಾಜ್, ಬಸವರಾಜ್, ದೇವರಹಳ್ಳಿ ಶಂಕರ್, ರಂಗನಾಥ್, ನಾಗರಾಜ್, ಮನು, ಅರುಣ್ ಕುಮಾರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
- - -(ಕೋಟ್) ಜಿಲ್ಲಾ ಆರೋಗ್ಯಾಧಿಕಾರಿ ಭರವಸೆ ಮೇರೆಗೆ ನಮ್ಮ ಪ್ರತಿಭಟನೆ ಸೋಮವಾರದವರೆಗೆ ವಾಪಸ್ ಪಡೆಯುತ್ತಿದ್ದೇವೆ. ಸೋಮವಾರ ಆಸ್ಪತ್ರೆಗೆ ವೈದ್ಯರು ನೇಮಕವಾಗದೇ ಇದ್ದರೆ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. - ಕಾಳೇಶ್, ಅಧ್ಯಕ್ಷ, ರೈತ ಸಂಘ, ಚನ್ನಗಿರಿ ತಾಲೂಕು
- - --25ಕೆಸಿಎನ್‌ಜಿ2.ಜೆಪಿಜಿ:
ಚನ್ನಗಿರಿ ತಾಲೂಕಿನ ದೇವರಹಳ್ಳಿ ಪ್ರಾಥಮಿಕ ಆರೋಗ್ಯಕ್ಕೆ ಶೀಘ್ರ ವೈದ್ಯರ ನೇಮಿಸಲು ಒತ್ತಾಯಿಸಿ ರೈತ ಸಂಘ-ಹಸಿರು ಸೇನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.