ಪಾಟೀಲ ಪುಟ್ಟಪ್ಪ ಧೀಮಂತ ವ್ಯಕ್ತಿತ್ವದ ಗಟ್ಟಿ ಧ್ವನಿ: ಸಾಹಿತಿ ಸಂಕಮ್ಮ

KannadaprabhaNewsNetwork | Published : Mar 17, 2025 12:31 AM

ಸಾರಾಂಶ

ಪಾಟೀಲ ಪುಟ್ಟಪ್ಪ ಅವರು ಕನ್ನಡ ಕಾವಲು ಸಮಿತಿ ಸದಸ್ಯರಿದ್ದಾಗ ಆಡಳಿತ ಭಾಷೆ ಕನ್ನಡವಾಗಲು ಸಾಕಷ್ಟು ಕೆಲಸ ಮಾಡಿದ್ದರು. ಅದಕ್ಕಾಗಿ ಆರು ಸಾವಿರ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಇವರ ಖಡಕ್ ವ್ಯಕ್ತಿತ್ವಕ್ಕೆ ರಾಜಕಾರಣಿಗಳು ಸಹ ಅಂಜುತ್ತಿದ್ದರು.

ಹಾವೇರಿ: ಕನ್ನಡ ನಾಡು, ನುಡಿಗಾಗಿ ದಿಟ್ಟವಾಗಿ ಹೋರಾಡಿದವರಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಅತ್ಯಂತ ಪ್ರಮುಖರಾದವರು. ನುಡಿದಂತೆ ನಡೆದ ಪಾಪು ಅವರ ಘರ್ಜನೆಗೆ ಭ್ರಷ್ಟ ಅಧಿಕಾರಿಗಳು ನಡುಗುತ್ತಿದ್ದರು ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ತಿಳಿಸಿದರು.ನಗರದಲ್ಲಿ ಭಾನುವಾರ ಪಾಪು ಅಭಿಮಾನಿಗಳ ಬಳಗದ ವತಿಯಿಂದ ನಡೆದ ಐದನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಪು ಅವರು ನಾಡಿನ ಜ್ವಲಂತ ಪ್ರಶ್ನೆಗಳಿಗಾಗಿ ನಿರ್ಭಿಡೆಯಿಂದ ಪ್ರತಿರೋಧಿಸುತ್ತಿದ್ದರು. ಅತ್ಯಂತ ನಿಷ್ಠುರವಾಗಿದ್ದ ಅವರು ಎಂದೂ ನಿಷ್ಕರುಣಿಯಾಗಿರಲಿಲ್ಲ ಎಂದರು.

ಕನ್ನಡ ಕಾವಲು ಸಮಿತಿ ಸದಸ್ಯರಿದ್ದಾಗ ಆಡಳಿತ ಭಾಷೆ ಕನ್ನಡವಾಗಲು ಸಾಕಷ್ಟು ಕೆಲಸ ಮಾಡಿದ್ದರು. ಅದಕ್ಕಾಗಿ ಆರು ಸಾವಿರ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಇವರ ಖಡಕ್ ವ್ಯಕ್ತಿತ್ವಕ್ಕೆ ರಾಜಕಾರಣಿಗಳು ಸಹ ಅಂಜುತ್ತಿದ್ದರು ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕಾಗಿ ಪಾಪು ಅವರು ಅತ್ಯಂತ ಬದ್ಧತೆಯಿಂದ ದುಡಿದರು. ನಾಡು ನುಡಿಯ ಏಳಿಗೆಗಾಗಿ ಅವರು ಕೆಲಸ ಮಾಡುವಾಗ ದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡಂತಹ ಮಹಾನ್‌ ವ್ಯಕ್ತಿತ್ವ ಹೊಂದಿದ್ದರು. ಅವರ ದೃಢತೆ, ಬದ್ಧತೆ ಹಾಗೂ ನಿರ್ಭಿಡೆ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿಕೊಳ್ಳಬೇಕು ಎಂದರು.

ಸತೀಶ ಎಂ.ಬಿ., ಪೃಥ್ವಿರಾಜ ಬೆಟಗೇರಿ ಹಾಗೂ ಸುಶೀಲಾ‌ ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪಾಪು ಅವರ ಪ್ರತಿಮೆಗೆ ಪುಷ್ಪಾರ್ಪಣೆ ಸಲ್ಲಿಸಲಾಯಿತು.

ಪಾಪು ಅಭಿಮಾನಿ ಬಳಗದ ಪರಿಮಳ ಜೈನ, ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಸಿ.ಆರ್. ಮಾಳಗಿ, ರೇಣುಕಾ ಗುಡಿಮನಿ, ಬಸವರಾಜ ಎಸ್, ಎಸ್.ಆರ್. ಹಿರೇಮಠ, ರಮೇಶ ತಳವಾರ, ವಿಠ್ಠಲ ಗೌಳಿ, ಬಸನಗೌಡ ಎನ್. ಭರಮಗೌಡ್ರ, ಎಂ.ಕೆ. ಮಕಬುಲ್, ಮಧು ನೆಗಳೂರು, ಖಲಂದರ್ ಅಲ್ಲಿಗೌಡ್ರ, ರೇಷ್ಮಾ ಅಲ್ಲಿಗೌಡ್ರ, ರಾಜೇಂದ್ರ ಹೆಗಡೆ, ಕೆ.ಆರ್. ಹಿರೇಮಠ, ಶಿಲ್ಪಾ ಎಚ್. ಗದಿಗೇರ, ತಿಪ್ಪೇಸ್ವಾಮಿ ಹೊಸಮನಿ, ಸಂಜಯಗಾಂಧಿ ಸಂಜೀವಣ್ಣನವರ, ಎಸ್.ಜಿ. ಹೊನ್ನಪ್ಪನವರ, ಶಶಿಕಲಾ ಅಕ್ಕಿ, ಬಸವರಾಜ ಸಾವಕ್ಕನವರ ಇದ್ದರು. ಬಸವರಾಜ ಪೂಜಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ ಎಚ್.ಎಂ. ವಂದಿಸಿದರು.ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ಹಾನಗಲ್ಲ: ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯ ಹಾಗೂ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡಿ 1992- 93ರಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮಾ. 23 ರಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ.

ಮಾ. 23ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ತಮಗೆ ವಿದ್ಯಾದಾನ ಮಾಡಿದ ಎಲ್ಲ ಗುರು ಬಳಗವನ್ನು ಗೌರವಿಸಲಿದ್ದಾರೆ. 1988 ಮತ್ತು 1989ರಲ್ಲಿ ನ್ಯೂಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ 1990ರಿಂದ 1992ರ ಅವಧಿಯಲ್ಲಿ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿದ ಎಲ್ಲ ವಿದ್ಯಾರ್ಥಿಗಳು ಈ ಗೌರವಪೂರ್ಣ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಅರವಿಂದ ನಾಗಜ್ಜನವರ ಹಾಗೂ ಗೆಳೆಯರ ಬಳಗ ಮನವಿ ಮಾಡಿದೆ.

Share this article