ಪಾವಗಡ ಆಸ್ಪತ್ರೆ ಕೇಸ್:‌ 6 ಜನರ ತಲೆದಂಡ

KannadaprabhaNewsNetwork | Updated : Feb 28 2024, 11:19 AM IST

ಸಾರಾಂಶ

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿ 6 ಜನರ ತಲೆದಂಡವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು/ಪಾವಗಡ

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿ 6 ಜನರ ತಲೆದಂಡವಾಗಿದೆ.

ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಚ್.ಎಂ. ಪೂಜಾ, ಶುಶ್ರೂಷಾಧಿಕಾರಿ ಪದ್ಮಾವತಿ ಹಾಗೂ ಓಟಿ ತಂತ್ರಜ್ಞ ಕಿರಣ್ ಎಂಬುವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.

ಕಾಯಂ ಸಿಬ್ಬಂದಿಗಳಾದ ಶುಶ್ರೂಷಕಿಯರಾದ ನಾಗರತ್ನಮ್ಮ, ಮಾರಕ್ಕ ಎಂಬುವವರನ್ನು ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖಾವಾರು ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ.

ಉಳಿದಂತೆ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ. ಕಿರಣ್ ಅವರನ್ನು ವೈ.ಎನ್. ಹೊಸಕೋಟೆಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಎಎಸ್ಎಲ್ ಬಾಬು ಅವರನ್ನು ನೇಮಿಸಲಾಗಿದೆ ಎಂದು ಡಿಎಒ ಡಾ. ಮಂಜುನಾಥ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಕಾರಣ ಕೇಳಿ 7 ಜನರಿಗೂ ನೋಟಿಸ್ ಕೊಡಲಾಗಿದೆ. ಇದರಲ್ಲಿ ಪಾವಗಡ ಸಾರ್ವಜನಿಕ ಆಸ್ಪತ್ರೆಯ ಅನಸ್ತೇಷಿಯಾ ತಜ್ಞೆ ಡಾ. ನಮ್ರತಾ ಅವರಿಗೂ ಕೂಡಾ ನೋಟಿಸ್ ಕೊಡಲಾಗಿದೆ. 

ಇವರದ್ದು ಕೂಡಾ ಕರ್ತವ್ಯ ಲೋಪ ಕಂಡು ಬಂದಿದ್ದು ಇವರ ಮೇಲೆ ಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಮಿಷನರ್‌ಗೆ ಕ್ರಮ ಜರುಗಿಸಲು ವರದಿ ನೀಡಲಾಗಿದೆ.

ಫೆ.22 ರಂದು ಪಾವಗಡದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಒಟ್ಟು 7 ಜನರಿಗೆ ಸಂತಾನಹರಣ, ಸಿಸೆರಿಯನ್ ಮತ್ತು ಗರ್ಭಕೋಶದ ಆಪರೇಶನ್ ನಡೆದಿದೆ. ಆಪರೇಷನ್ ನಡೆದ ದಿನವೇ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವನಪ್ಪಿದ್ದಾಳೆ. 

ಇನ್ನಿಬ್ಬರ ಸ್ಥಿತಿ ಗಂಭೀರ ಆಗಿದ್ದರಿಂದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ಒಬ್ಬರು ಶುಕ್ರವಾರ ಮತ್ತೊಬ್ಬರು ಸೋಮವಾರ ಅಸುನೀಗಿದ್ದರು. 

ಈ ಪ್ರಕರಣ ಸಂಬಂಧ ತನಿಖಾ ತಂಡವನ್ನು ರಚಿಸಲಾಗಿತ್ತು. ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ.

ಅಲ್ಲದೇ ಸ್ಟೇಟ್ ಲೆವೆಲ್ ಡೆಪ್ಯುಟಿ ಡೈರೆಕ್ಟರ್‌ ಕೂಡಾ ತನಿಖೆ ನಡೆಸಿದ್ದು, ಅವರ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ವೇಳೆ ಕರ್ತವ್ಯ ಲೋಪ ಎಸಗಿರೋದು ಹಾಗೂ ಸೋಂಕು ನಿವಾರಣೆ, ಸೋಂಕು ತಡೆಗೆ ಕೆಲ ಕ್ರಮಗಳನ್ನ ಜರುಗಿಸದೇ ಇರೋದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಘಟನೆಯ ಸಂಪೂರ್ಣ ವರದಿ ಬರಲು 20 ದಿನ ಬೇಕಾಗುತ್ತದೆ ಎಂದು ತಿಳಿಸಿದ ಅವರು ಮೃತ ಮಹಿಳೆಯ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ.

Share this article