ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರದ್ದುಗೊಳಿಸಿ ನೀಡಿರುವ ತೀರ್ಪಿನ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಪ್ರಕರಣದ ಎ1 ಆರೋಪಿ ಪವಿತ್ರಾಗೌಡಗೆ ಜೈಲೇ ಗತಿಯಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬಳಿಕ ಪವಿತ್ರಾ ಮತ್ತೆ ಜೈಲು ಸೇರಿದ್ದರು. ಈ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ಕೋರಿ ಪವಿತ್ರಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ವಿಚಾರಣೆ ನಡೆಸಿದ ನ್ಯಾ.ಪರ್ದೀವಾಲ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿ ವಿಚಾರಣೆ ವೇಳೆ ನಾವು ಆದೇಶ ಮತ್ತು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. 2024ರ ಡಿ.13 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಇವರೆಲ್ಲರ ಜಾಮೀನನ್ನು ರದ್ದುಗೊಳಿಸಿತ್ತು. ಈ ತೀರ್ಪಿನ ಮರು ಪರಿಶೀಲನೆ ಕೋರಿ ಪವಿತ್ರಾ ಗೌಡ ಅವರು ಮಂಗಳವಾರ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.‘ನಾನು ಸಿಂಗಲ್ ಪೇರೆಂಟ್. ನನ್ನ ಮಗಳು ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ. ನನಗೆ ವಯಸ್ಸಾಗಿರುವ ಪೋಷಕರು ಇದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಕೃತ್ಯದಲ್ಲಿ ನನ್ನ ಪಾತ್ರ ಇಲ್ಲ. ಹಾಗಾಗಿ, ಜಾಮೀನು ರದ್ದು ಕುರಿತ ತೀರ್ಪನ್ನು ಮರು ಪರಿಶೀಲಿಸಿ’ ಎಂದು ಅರ್ಜಿಯಲ್ಲಿ ಪವಿತ್ರಾ ಗೌಡ ಮನವಿ ಮಾಡಿದ್ದರು.