ಕುಡಿವ ನೀರಿನ ನಿರ್ವಹಣೆ ಗಮನಿಸಿ: ಮನೋಜ್‌ ಜೈನ್‌

KannadaprabhaNewsNetwork |  
Published : Sep 19, 2026, 01:15 AM IST
ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ವಿಪತ್ತು ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹1 ಕೋಟಿ ಬಿಡುಗಡೆಯಾಗಿದ್ದು, ಕ್ರಿಯಾಯೋಜನೆ ಅನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹1 ಕೋಟಿ ಬಿಡುಗಡೆಯಾಗಿದ್ದು, ಕ್ರಿಯಾಯೋಜನೆ ಅನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿಪತ್ತು ನಿರ್ವಹಣೆ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ತೀವ್ರ ಬರದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನಿಗಾ ವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮುಂದೆ ಉದ್ಭವಿಸಬಹುದಾದ ನೀರಿನ ಅಭಾವ ಕುರಿತು ಪೂರ್ವಭಾವಿಯಾಗಿ ನಿಗಾ ವಹಿಸಬೇಕು. ಕ್ಷೇತ್ರವಾರು ನಿರಂತರ ಗ್ರೌಂಡ್ ವಾಟರ್ ಪ್ರಮಾಣ ಪರೀಕ್ಷೆ ಮಾಡಿ ಚಾಣ್ಮೆಯಿಂದ ನೀರು ಬಳಕೆಗೆ ನಿಗಾ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಜಲಧಾರೆ ಯೋಜನೆಯಡಿಯ ಕಾಮಗಾರಿ ಚುರುಕುಗೊಳಿಸಿ ಆದಷ್ಟು ಬೇಗ ಪೂರ್ಣಗೊಳಿಸುವ ಮೂಲಕ ಈ ಭಾಗದ ಜನರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳೂ ವೇಗವಾಗಿ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯ ನಾರಾಯಣಪುರ, ಸನ್ನತಿ, ಬ್ಯಾರೇಜ್ ನೀರಿನ ಬಗ್ಗೆ ಮಾಹಿತಿ ಪಡೆದ ಅವರು ಬರ ಇರುವ ಹಿನ್ನೆಲೆಯಲ್ಲಿ ನೀರಿನ ನಿರ್ವಹಣೆ ಅತಿಮುಖ್ಯವಾಗಿದ್ದು, ಅಧಿಕಾರಿಗಳು ತುರ್ತು ಸಂದರ್ಭಕ್ಕನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಕೃಷಿ ಇಲಾಖೆಯಂತೆ ತೋಟಗಾರಿಕೆ ಇಲಾಖೆ ಮೂಲಕ ಕ್ಲಸ್ಟರ್ ರೂಪಿಸಬೇಕು. ಗುರುಮಠಕಲ್ ಹಾಗೂ ಸುರಪುರ ಅರಣ್ಯ ಪ್ರದೇಶಗಳು ವಿವಿಧ ಹಣ್ಣುಗಳಿಗೆ ಉತ್ತಮ ಪರಿಸರ ಹೊಂದಿರುವುದರಿಂದ ಈ ಕುರಿತು ವಿಶೇಷ ಗಮನ ನೀಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಅವಶ್ಯಕ ಇಲಾಖೆಗಳು ಬರ ಇರುವ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮನೋಜ್ ಜೈನ್‌ ಸೂಚಿಸಿದರು.

ಶಾಲಾ ಶೈಕ್ಷಣಿಕ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಮಕ್ಕಳಲ್ಲಿ ನಿರಂತರ ಓದುವ ಹವ್ಯಾಸ ಬೆಳೆಸಬೇಕು. ಫಲಿತಾಂಶ ಸುಧಾರಣೆ ಮತ್ತು ಫಲಿತಾಂಶದಲ್ಲಿ ರ್‍ಯಾಂಕ್‌ ಹೆಚ್ಚಳಕ್ಕೆ ಗಮನ ನೀಡುವಂತೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ವಿವಿಧ ಜಲಾಶಯಗಳ ನೀರಿನ ಪ್ರಮಾಣ,ನಿರ್ವಹಣೆ, ಕೃಷ್ಣಾ,ಭೀಮಾ ನದಿ ನೀರಿನ ಪ್ರಮಾಣ ಇತರೆ ಅವಶ್ಯಕ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗ ಅವಕಾಶ ಹೆಚ್ಚಳಕ್ಕೆ ಸೂಚನೆ: ವಿ.ಬಿ.ಜಿ.ರಾಮ್ ಜಿ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗವಕಾಶ ಕಲ್ಪಿಸಿ ಜನ ವಲಸೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಮಾನವ ದಿನ ಸೃಜನೆಯಲ್ಲಿ ಹಿಂದುಳಿದ, ಸುಮಾರು 25 ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಅರಿವು, ತರಬೇತಿ ಕಾರ್ಯಕ್ರಮ ಏರ್ಪಡಿಸಿ ಸರಿಯಾಗಿ ಕೆಲಸ ನಿರ್ವಹಣೆಗೆ ಎಚ್ಚರಿಕೆ ನೀಡಬೇಕು. ಉತ್ತಮ ಕೆಲಸ ನಿರ್ವಹಿಸಿದವರಿಗೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ