ರಾಮನಗರ: ಅರ್ಕಾವತಿ ನದಿಯಿಂದ ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಕಸಬಾ ಮತ್ತು ಕೈಲಾಂಚ ಹೋಬಳಿ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಡಿ.ಕೆ.ಸುರೇಶ್ ಸಂಸದರಾಗಿದ್ದ ಅವಧಿಯಲ್ಲಿ ವಡ್ಡರಹಳ್ಳ-ಗುನ್ನೂರು ಭಾಗದ ರೈತರಿಗೆ ನೆರವಾಗಲು 10 ಕೋಟಿ ರು. ವೆಚ್ಚದಲ್ಲಿ ಅರ್ಕಾವತಿ ನದಿಯಿಂದ ವಡ್ಡರಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಹೊಸಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಈಗ ಚೆಕ್ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣಗೊಂಡಿದೆ. ಸುಮಾರು 45 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ನೀರಿನಿಂದ ಅಂದಾಜು 590 ಎಕರೆ ಅಚ್ಚುಕಟ್ಟು ಪ್ರದೇಶಗಳಿಗೆ ಅನುಕೂಲವಾಗುತ್ತದೆ. ಇದರಿಂದ ರೈತರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈಗಾಗಲೇ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, 500-600 ಎಕರೆ ಕೃಷಿ ಪ್ರದೇಶಕ್ಕೆ ನೀರು ಹಾಯಿಸಲಾಗುತ್ತಿದೆ. ಇದನ್ನು ಲಕ್ಕಪ್ಪನಹಳ್ಳಿವರೆಗೆ ಅಂದರೆ 1 ಸಾವಿರ ಎಕರೆಯಷ್ಟು ಕೃಷಿ ಪ್ರದೇಶಕ್ಕೂ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆ 28 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಅದರ ಕಾಮಗಾರಿ ಅಂತಿಮ ಹಂತ ತಲುಪಿದೆ. 124 ಕೋಟಿ ರು. ವೆಚ್ಚದಲ್ಲಿ ಗಾಣಾಳು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇವೆ. ಇದೀಗ ಕೆ.ಪಿ.ದೊಡ್ಡಿಯಲ್ಲಿಯೂ ಏತ ನೀರಾವರಿ ಯೋಜನೆಗೆ ಬೇಡಿಕೆ ಬಂದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸುಮಾರು 16 ಕೋಟಿ ವೆಚ್ಚದಲ್ಲಿ ಆ ಯೋಜನೆಯನ್ನೂ ಕಾರ್ಯಗತಗೊಳಿಸಿದರೆ ಸುಮಾರು 1 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ವಿಶೇಷ ಅಧಿವೇಶನದಲ್ಲಿ ಸಚಿವರ ಮನವೊಲಿಸಿ ಕೆ.ಪಿ.ದೊಡ್ಡಿ ಏತನೀರಾವರಿ ಯೋಜನೆಗೆ ಅನುಮೋದನೆ ಪಡೆಯುತ್ತೇನೆ ಎಂದು ಹೇಳಿದರು.
18ಕೆಆರ್ ಎಂಎನ್ 1.ಜೆಪಿಜಿ