ಪರಿಸರಕ್ಕೆ ಮಾರಕವಾಗುವ ಕಟ್ಟಡದಿಂದ ಭವಿಷ್ಯದಲ್ಲಿ ಅಪಾಯ

KannadaprabhaNewsNetwork |  
Published : Sep 19, 2026, 01:15 AM IST
3 | Kannada Prabha

ಸಾರಾಂಶ

ಸುಸ್ಥಿರ, ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡಬೇಕು. ನಿಸರ್ಗಕ್ಕೆ ವಿರುದ್ಧವಾಗಿ ಹೋಗದೆ, ಅದಕ್ಕೆ ಪೂರಕವಾಗಿ ಕಟ್ಟಡ ನಿರ್ಮಾಣವಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಖರ್ಚು, ಸಮಯ ಕಡಿಮೆ ಮಾಡುವ, ಪರಿಸರಕ್ಕೆ ಮಾರಕವಾಗುವ ಕಟ್ಟಡ ನಿರ್ಮಿಸಿದರೇ ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಮದ್ರಾಸ್ ಐಐಟಿ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಸಿ.ವಿ.ಆರ್. ಮೂರ್ತಿ ಎಚ್ಚರಿಸಿದರು.ವಿಶ್ವೇಶ್ವರನಗರದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ಮೈಸೂರು ಕೇಂದ್ರವು ಆಯೋಜಿಸಿದ್ದ ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಸುಸ್ಥಿರ ವಿನ್ಯಾಸ ಕುರಿತು ಎರಡು ದಿನಗಳ ರಾಷ್ಟ್ರೀಯ ತಾಂತ್ರಿಕ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸುಸ್ಥಿರ, ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡಬೇಕು. ನಿಸರ್ಗಕ್ಕೆ ವಿರುದ್ಧವಾಗಿ ಹೋಗದೆ, ಅದಕ್ಕೆ ಪೂರಕವಾಗಿ ಕಟ್ಟಡ ನಿರ್ಮಾಣವಾಗಬೇಕು ಎಂದರು.ನೈಸರ್ಗಿಕವಾಗಿ ಗಾಳಿ- ಬೆಳಕು ಪ್ರವೇಶಕ್ಕೆ ಅವಕಾಶ ಇರುವಂತೆ ಮನೆ ವಿನ್ಯಾಸ ಇರಬೇಕು. ಅಲಂಕಾರಕ್ಕಾಗಿ ಈ ಪರಿಸರ ನಿಯಮ ಉಲ್ಲಂಘಿಸಿದರೆ ಎಸಿ, ಕರೆಂಟ್‌ ನಂತಹ ವೆಚ್ಚ ಏರಿಕೆಯಾಗಿ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದರು.

ಪರಿಸರ ನಾಶ ಮಾಡಿ ಕಟ್ಟಡ, ಬೃಹತ್ ಯೋಜನೆ ನಿರ್ಮಿಸಿದರೆ ಮನುಷ್ಯನ ಸುರಕ್ಷತೆಗೆ ಸಂಚಕಾರವಾಗಲಿದೆ. ವಿದೇಶದ ಹೊಸ ತಂತ್ರಜ್ಞಾನವನ್ನು ದೇಶದ ನಿರ್ಮಾಣ ಕ್ಷೇತ್ರದಲ್ಲಿ ಯಥಾವತ್ತು ಅನುಷ್ಠಾನ ಬೇಡ. ಮೊದಲು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಿ ಸಾಧಕ- ಬಾಧಕ ಪರಿಶೀಲಿಸಿ, ಸ್ಥಳೀಯ ಪರಿಸರ, ವಾತಾವರಣಕ್ಕೆ ಪೂರಕವಾಗಿದ್ದರೆ ಮಾತ್ರ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಬಿಎಐ ಕರ್ನಾಟಕ ಅಧ್ಯಕ್ಷ ಎಸ್. ಶಿವಪ್ರಕಾಶ್, ಮೈಸೂರು ಕೇಂದ್ರದ ಅಧ್ಯಕ್ಷ ಕೆ.ಆರ್. ಪ್ರಭಾಕರ ರಾವ್, ಕಾರ್ಯದರ್ಶಿ ಪ್ರವೀಣ್ ಪಾಲ್, ಬಿಲ್ಡ್ ಟೆಕ್- 26 ಅಧ್ಯಕ್ಷ ಎಚ್.ಎಸ್. ದೀಪಕ್, ಕಾರ್ಯದರ್ಶಿ ಆರ್. ರವಿ ಮೊದಲಾದವರು ಇದ್ದರು.----ಕೋಟ್...ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ ಮನೆಗಳ ನಿರ್ಮಾಣದಲ್ಲಿ ಕಾಂಕ್ರಿಟ್, ಕಬ್ಬಿಣದ ವಸ್ತುಗಳ ಬಳಕೆ ಕಡಿಮೆ ಮಾಡಿ ಮರುಬಳಕೆ ಮಾಡುವಂತಹ ಸಾಂಪ್ರದಾಯಿಕ ವಸ್ತುಗಳಾದ ಕಲ್ಲು, ಮರಗಳ ಉಪಯೋಗ ಹೆಚ್ಚಾಗಬೇಕು. ಇದು ಪರಿಸರಕ್ಕೆ ಪೂರಕ, ಸುಸ್ಥಿರ ಅಭಿವೃದ್ಧಿಗೂ ರಹದಾರಿಯಾಗಿದೆ. ನಿಸರ್ಗದ ಮೇಲಿನ ಒತ್ತಡವನ್ನೂ ತಗ್ಗಿಸಬಹುದಾಗಿದೆ.- ಡಾ.ಸಿ.ವಿ.ಆರ್. ಮೂರ್ತಿ, ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು, ಮದ್ರಾಸ್ ಐಐಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ