;Resize=(412,232))
ಬೆಂಗಳೂರು : ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಪರದಾಡುತ್ತಿರುವ ಕಾರ್ಡ್‌ದಾರರಿಗೆ ತುಸು ರಿಲೀಫ್ ಕೊಟ್ಟಿರುವ ರಾಜ್ಯ ಸರ್ಕಾರ, ಇಕೆವೈಸಿ ಅವಧಿಯನ್ನು ಅ.20ವರೆಗೆ ವಿಸ್ತರಿಸಿ ಆದೇಶಿಸಿದೆ. ಜತೆಗೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ತಾಂತ್ರಿಕದೋಷ, ಸರ್ವರ್ ಮಂದಗತಿಯ ಕಾರಣದಿಂದ ಇಕೆವೈಸಿ ಮಾಡಿಸಲು ಗ್ರಾಹಕರು ಸಂಕಷ್ಟ ಅನುಭವಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಇಕೆವೈಸಿ ಪೂರ್ಣಗೊಳಿಸಲು ಅ.20ವರೆಗೆ ಅಂತಿಮ ಗಡುವು ವಿಸ್ತರಿಸಲು ಆದೇಶಿಸಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಫಲಾನುಭವಿಗಳು ಯಾವುದೇ ಗೊಂದಲವಿಲ್ಲದೆ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಪೂರ್ಣಗೊಳಿಸಿ ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು. ಅಲ್ಲದೆ, ಸಾರ್ವಜನಿಕರ ಪಡಿತರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿ, ಪಾರದರ್ಶಕಗೊಳಿಸಲು ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ.
ಅ.1 ರಿಂದ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆಯಬೇಕು. ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಪಡಿತರ ಪಡೆದುಕೊಳ್ಳಬಹುದು ಎಂದು ಸಚಿವರು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಆಹಾರ ಇಲಾಖೆಯಿಂದ ರಾಜ್ಯಾದ್ಯಂತ ಇ-ಕೆವೈಸಿ ಪ್ರಕ್ರಿಯೆ ಕೈಗೆತ್ತಿಗೊಂಡಿದೆ. 2.65 ಕೋಟಿ ಸದಸ್ಯರು ಸೆ.30ರೊಳಗೆ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ಈ ಹಿಂದೆ ಗುಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಕೆವೈಸಿ ಮಾಡಿಸಿಕೊಳ್ಳಲು ಕಾರ್ಡ್‌ದಾರರು, ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂಭಾಗ ಸರದಿ ಸಾಲಿನಲ್ಲಿ ದಿನಗಟ್ಟಲೆ ಕಾಯಬೇಕಿತ್ತು. ಸರ್ವರ್ ಸಮಸ್ಯೆಯಿಂದ ಇಕೆವೈಸಿ ಮಾಡಿಸಿಕೊಳ್ಳಲು ಬಿಪಿಎಲ್ ಚೀಟಿದಾರರಿಗೆ ಸಾಧ್ಯವಾಗುತ್ತಿರಲಿಲ್ಲ.