ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಘುನಾಥಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮದ ನೀರನ್ನು ಖಾಸಗಿ ಲೇಔಟ್‌ಗೆ ಪೂರೈಸಲಾಗುತ್ತಿದೆ ಹಾಗೂ ಲೇಔಟ್‌ನ ಕೊಳಚೆ ನೀರು ಕೆರೆಗೆ ಹರಿದು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಘುನಾಥಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮದ ನೀರನ್ನು ಖಾಸಗಿ ಲೇಔಟ್‌ಗೆ ಪೂರೈಸಲಾಗುತ್ತಿದೆ ಹಾಗೂ ಲೇಔಟ್‌ನ ಕೊಳಚೆ ನೀರು ಕೆರೆಗೆ ಹರಿದು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈ ಕುರಿತು ಗ್ರಾಮಸ್ಥರು , ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ಲೇಔಟ್‌ಗೆ ನೀರು ಪೂರೈಕೆಯನ್ನು ಗ್ರಾಮಸ್ಥರೇ ಸ್ಥಗಿತಗೊಳಿಸಿದ್ದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ರಘುನಾಥಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ್ದರು. ಈ ವೇಳೆ ಲೇಔಟ್‌ನ ಕೊಳಚೆ ನೀರು ನೇರವಾಗಿ ಗ್ರಾಮದ ಕೆರೆಗೆ ಸೇರುತ್ತಿದ್ದು, ಕೆರೆಯಲ್ಲಿರುವ ಎರಡು ಕೊಳವೆಬಾವಿಗಳ ನೀರನ್ನೇ ಗ್ರಾಮಸ್ಥರು ಕುಡಿಯಲು ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಕೊಳಚೆ ನೀರು ಕೆರೆಗೆ ಸೇರುತ್ತಿರುವುದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಲೇಔಟ್‌ನ ಕೊಳಚೆ ನೀರಿನ ಟ್ಯಾಂಕ್‌ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಕೆರೆಗೆ ನೀರು ಸೇರುವುದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದ್ದರು.

ಈ ವೇಳೆ ಅಧಿಕಾರಿಗಳು ಮೂರು ದಿನಗಳೊಳಗೆ ಕೊಳಚೆ ನೀರು ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಸೂಕ್ತ ರೀತಿಯಲ್ಲಿ ಕೊಳಚೆ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ವೇಳೆ ರಘುನಾಥಪುರ ಗ್ರಾಮಕ್ಕೆ ಕುಡಿಯಲು ಸಾಕಾಗದಷ್ಟು ನೀರು ಇರುವಾಗ ಖಾಸಗಿ ಲೇಔಟ್‌ಗಳಿಗೆ ನೀರು ಪೂರೈಸುತ್ತಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಸುತ್ತಮುತ್ತಲಿನ ಹಲವು ಖಾಸಗಿ ಲೇಔಟ್‌ಗಳಿಗೆ ಗ್ರಾಮದ ನೀರನ್ನು ಪೂರೈಸಿದರೆ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಆದ್ದರಿಂದ ಗ್ರಾಮಸ್ಥರಿಗೆ ಮೊದಲ ಆದ್ಯತೆಯಲ್ಲಿ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮೂರು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ಈಗಲೂ ಸಮಸ್ಯೆ ಮುಂದುವರೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಫೋಟೋ-

18ಕೆಡಿಬಿಪಿ4- ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಗ್ರಾಮಕ್ಕೆ ನೀರಿನ ಸಮಸ್ಯೆ ಹಿನ್ನಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.