- ಶಿಕ್ಷಕರ ದಿನಾಚರಣೆ ಅಂಗವಾಗಿ ಖಾಸಗಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಕ್ಕಳಿಗೆ ಪುಸ್ತಕದಷ್ಟೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ಹಾಗೂ ಹಾಗೂ ಇತರೆ ಪುಸ್ತಕಗಳನ್ನು ಓದುವುದನ್ನು ಶಾಲಾ ಹಂತದಲ್ಲಿಯೇ ಶಿಕ್ಷಕರು ಕಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಸೋಲುವ ಅನುಭವ ಕ್ರೀಡೆಗಳಿಂದ ತಿಳಿಯುತ್ತದೆ. ಬದುಕಲ್ಲಿ ಸೋಲುಗಳನ್ನು ಕಂಡಾಗ ಹತಾಶ ಮನೋಭಾವವನ್ನು ಬಿಟ್ಟು ಸವಾಲನ್ನಾಗಿ ಪರಿಗಣಿಸಿ ಗೆಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಎರಡರ ಅನುಭವ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಆಗ ಸೋತಾಗ ಸೋಲಿನ ಕಹಿಯನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಬೆಳೆಯುತ್ತದೆ. ಸೋಲಿನ ಅನುಭವವೇ ಇಲ್ಲದೆ ಮಾನಸಿಕ ಸೋಲನ್ನು ಸಮರ್ಥವಾಗಿ ಎದುರಿಸಲು ಅವರಿಗೆ ಸಾಧ್ಯವಾಗುವುದಿಲ್ಲ . ಆದ್ದರಿಂದ ವಿದ್ಯಾರ್ಥಿಗಳು ಆದಷ್ಟು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಿ. ಟಿ.ಶ್ರೀನಿವಾಸ್ ಮಾತನಾಡಿ, ದಾವಣಗೆರೆ ಆರೋಗ್ಯ ಭಾಗ್ಯ ಯೋಜನೆಯನ್ನು ಖಾಸಗಿ ಶಾಲೆಯ ಶಿಕ್ಷಕರಿಗೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಆ ನಿಟ್ಟಿನಲ್ಲಿ ಆರೋಗ್ಯ ವಿಮೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆ ಎಸ್‌ಎಸ್ಎಲ್‌ಸಿ ಫಲಿತಾಂಶದಲ್ಲಿ 23ನೇ ಸ್ಥಾನದಲ್ಲಿದ್ದು, ಅನುದಾನಿತ ಸರ್ಕಾರಿ ಮತ್ತು ಅನುದಾನ ರಹಿತ ಶಾಲೆಗಳೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಮಾತ್ರ ರಾಜ್ಯದಲ್ಲಿ ದಾವಣಗೆರೆ ಐದನೇ ಸ್ಥಾನಕ್ಕೆ ಏರಲಿದೆ ಎಂದ ಅವರು, ಶಿಕ್ಷಕರ ವೆಲ್ಫೇರ್ ಫಂಡ್ ಶಿಕ್ಷಕರಿಗೆ ಮಾತ್ರ ಸದ್ಬಳಕೆ ಆಗಬೇಕು. ಆ ನಿಟ್ಟಿನಲ್ಲಿ ನಾನು ಕೂಡ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಹಾಗೂ ಖಾಸಗಿ ಶಿಕ್ಷಕರೆಲ್ಲರೂ ಕೋ ಆಪರೇಟಿವ್ ಸೊಸೈಟಿಗಳನ್ನು ಮಾಡಿಕೊಂಡು ಅದರಲ್ಲಿ ಹಣ ತೊಡಗಿಸಿ ಸದ್ಬಳಕೆ ಮಾಡಿಕೊಳ್ಳಿ. ನಾನು ಕೂಡ ನಿಮಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಜಿಲ್ಲಾ ಅತ್ಯುತ್ತಮ ಶಿಕ್ಷಕ ಶ್ರೀ ಸೇವಾ ಪ್ರಶಸ್ತಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಅಧ್ಯಕ್ಷತೆಯನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಸಂತೋಷ್ ಕುಮಾರ್ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ, ದಕ್ಷಿಣ ವಲಯದ ಬಿಇಒ ಪುಷ್ಪಲತಾ ಮತ್ತು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.- - -
ಕೋಟ್ ಖಾಸಗಿ ಶಾಲೆಗಳ ನವೀಕರಣದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಹಳೆಯ ಶಾಲೆಗಳ ನವೀಕರಣದ ಅವಶ್ಯಕತೆ ಅಷ್ಟಾಗಿ ಇಲ್ಲ. ಹಾಗಾಗಿ ಕೇವಲ ಹೊಸ ಶಾಲೆಗಳ ನವೀಕರಣ ಮಾತ್ರ ಮಾಡುವುದು ಸೂಕ್ತ- ಡಿ.ಟಿ. ಶ್ರೀನಿವಾಸ್, ವಿಧಾನ ಪರಿಷತ್ತು
- - - -20ಕೆಡಿವಿಜಿ39ಃ:ದಾವಣಗೆರೆಯಲ್ಲಿಂದು ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.