ಬರದಿಂದ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ ರೈತರಿಗೆ ಒಂದು ವಾರದೊಳಗೆ ಬೆಳೆ ಪರಿಹಾರ ಪಾವತಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಬರದಿಂದ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ ರೈತರಿಗೆ ಒಂದು ವಾರದೊಳಗೆ ಬೆಳೆ ಪರಿಹಾರ ಪಾವತಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಧೈರ್ಯ ತುಂಬುವ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಸರ್ಕಾರ ರೈತ ವಿರೋಧಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ 283 ಕೋಟಿ ರು.ಬೆಳೆ ನಷ್ಟವಾಗಿರುವ ಕುರಿತು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದುವರೆಗೆ ಜಿಲ್ಲೆಗೆ ನಯಾ ಪೈಸೆ ಪರಿಹಾರ ಬಂದಿಲ್ಲ. ರೈತರ ಬದುಕು ಡೋಲಾಯಮಾನವಾಗಿದ್ದರೂ ಸರ್ಕಾರ ಸಂವೇದನಾಶೀಲತೆಯಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.
ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಲಾ 2500 ರು. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ದಸರಾ ಹಾಗೂ ದೀಪಾವಳಿ ಹಬ್ಬದೊಳಗೆ ಹಣ ಜಮೆ ಮಾಡುವ ಭರವಸೆ ನೀಡಲಾಗಿತ್ತಾದರೂ ಹಬ್ಬಗಳು ಮುಗಿದರೂ ರೈತರ ಖಾತೆಗಳಿಗೆ ಹಣ ಬಂದಿಲ್ಲ. ಸರ್ಕಾರದ ಪರಿಹಾರ ಘೋಷಣೆ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 3.73 ಲಕ್ಷ ರೈತರು 5.75 ಲಕ್ಷ ಎಕರೆ ಜಮೀನಿಗೆ ಸುಮಾರು 23 ಕೋಟಿ ರು.ವಿಮಾ ಕಂತು ಪಾವತಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ 51 ಕೋಟಿಯನ್ನು ವಿಮಾ ಕಂಪನಿಗಳಿಗೆ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ 51 ಕೋಟಿ ರು.ಬಿಡುಗಡೆ ಮಾಡದ ಕಾರಣ ರೈತರಿಗೆ ವಿಮಾ ಪರಿಹಾರ ದೊರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ಒಂದು ವಾರದೊಳಗೆ ರಾಜ್ಯ ಸರ್ಕಾರದ ಪಾಲಿನ ಹಣ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ವಿಮಾನಯಾನಕ್ಕೆ ಅನುದಾನ ನೀಡುವ ಸರ್ಕಾರ ರೈತರ ನೆರವಿಗೂ ಮುಂದಾಗಬೇಕು. ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ ಅವರು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 200 ರು. ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಉಸ್ತುವಾರಿ ಸಚಿವರ ಕಪಿಮುಷ್ಠಿಯಲ್ಲಿದ್ದು, ಮನಬಂದಂತೆ ಕೆಲಸ ಮಾಡುತ್ತಿದೆ. ನಗರದಲ್ಲಿ 48.23 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಡಳಿತ ಸಂಕಿರಣದ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಈಗ 13 ತಿಂಗಳಾದರೂ ಇನ್ನೂ ಬೆಸ್ಮೆಂಟ್ ಹಂತದಲ್ಲೇ ಇದೆ. ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರ ಲೂಟಿ ಹೊಡೆಯುವ ಕೇಂದ್ರಗಳಾಗಿವೆ ಎಂದು ಖೂಬಾ ಆರೋಪಿಸಿದರು.
ಬಿಎಸ್ಎಸ್ಕೆ ಪುನರಾರಂಭಕ್ಕೆ ಖೂಬಾ ಒತ್ತಾಯ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಲೀಸ್ ಕಮ್ ಸೇಲ್ ಆಧಾರದಲ್ಲಿ ಪುನರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ತೋರುತ್ತಿಲ್ಲ. ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಯ ಹಿತಾಸಕ್ತಿಗಾಗಿ ಬಿಎಸ್ಎಸ್ಕೆ ಪುನರಾರಂಭ ವಿಳಂಬ ಮಾಡಲಾಗುತ್ತಿದೆ ಎಂದು ಖೂಬಾ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮಹಾನಗರ ಪಾಲಿಕೆ ಸದಸ್ಯ ಶಶಿ ಹೊಸಳ್ಳಿ, ಮುಖಂಡರಾದ ಅಶೋಕ ಕರಂಜಿ, ಶ್ರೀನಿವಾಸ ಚೌದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.