ಭಾನುವಾರ ರಾಜ್ಯಾದ್ಯಂತ ಕೆಎಎಸ್ ಸೇರಿ 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆ ನಡೆಯಲಿದೆ. ಇತ್ತೀಚೆಗೆ ಪಶುವೈದ್ಯ ಹುದ್ದೆ ನೇಮಕ ಅಕ್ರಮ ಬೆಳಕಿಗೆ ಬಂದ ಬಳಿಕ ನಡೆಯುತ್ತಿರುವ ಮೊದಲ ಪರೀಕ್ಷೆ ಇದಾಗಿದ್ದು, ಪುನಃ ಅಕ್ರಮ ಮರುಕಳಿಸದಿರಲು ಬಿಗಿ ನಿಯಮ ಕೈಗೊಳ್ಳಲಾಗಿದೆ.
ಬೆಂಗಳೂರು : ಭಾನುವಾರ ರಾಜ್ಯಾದ್ಯಂತ ಕೆಎಎಸ್ ಸೇರಿ 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆ ನಡೆಯಲಿದೆ. ಇತ್ತೀಚೆಗೆ ಪಶುವೈದ್ಯ ಹುದ್ದೆ ನೇಮಕ ಅಕ್ರಮ ಬೆಳಕಿಗೆ ಬಂದ ಬಳಿಕ ನಡೆಯುತ್ತಿರುವ ಮೊದಲ ಪರೀಕ್ಷೆ ಇದಾಗಿದ್ದು, ಪುನಃ ಅಕ್ರಮ ಮರುಕಳಿಸದಿರಲು ಬಿಗಿ ನಿಯಮ ಕೈಗೊಳ್ಳಲಾಗಿದೆ.
ಅಕ್ರಮ ತಡೆಗೆ ದ್ವಿಪ್ರತಿ ಬದಲು ತ್ರಿಪ್ರತಿ ಒಎಂಆರ್ ಹಾಳೆ, ಉತ್ತರ ಗೊತ್ತಿಲ್ಲದಿದ್ದರೆ ಅದಕ್ಕೆ ಐದನೇ ಆಯ್ಕೆ ದಾಖಲಿಸುವುದು ಕಡ್ಡಾಯ, ಪ್ರತಿ ಪರೀಕ್ಷಾ ಕೊಠಡಿಗೆ ಸಿಸಿ ಕ್ಯಾಮರಾ, ಜಾಮರ್ ಅಳವಡಿಕೆ, ವೆಬ್ಕಾಸ್ಟಿಂಗ್ ಮುಂತಾದ ಕಠಿಣ ಕ್ರಮಗಳ ಮೂಲಕ ಪರೀಕ್ಷೆ ನಡೆಯಲಿದೆ.
345 ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಗಳು
117 ಗ್ರೂಪ್ ಎ ಮತ್ತು 202 ಗ್ರೂಪ್ ಎ ಹುದ್ದೆಗಳಿಗೆ ರಾಜ್ಯದ 15 ಜಿಲ್ಲೆಗಳಲ್ಲಿನ 345 ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 319 ಹುದ್ದೆಗಳಿಗೆ 91,238 ಪುರುಷರು ಮತ್ತು 53,074 ಮಹಿಳೆಯರು ಸೇರಿ ಒಟ್ಟು 1.47 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ನಗರ, ತುಮಕೂರು, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ಆಯಾ ಜಿಲ್ಲೆಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ವಸ್ತ್ರ ಸಂಹಿತೆ ಹೀಗಿದೆ:
ಅಭ್ಯರ್ಥಿಗಳು ಗುರುತು ಪತ್ತೆ ಹಚ್ಚಲು ಸಾಧ್ಯವಾಗುವ ರೀತಿಯ ಸರಳ ಉಡುಪು ಧರಿಸಿ ಬರಬೇಕು. ತುಂಬು ತೋಳಿನ ಶರ್ಟ್, ಪದರಗಳುಳ್ಳ ವಿವಿಧ ರೀತಿಯ ವಿನ್ಯಾಸಗಳುಳ್ಳ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ರೀತಿಯ ಆಭರಣ ಧರಿಸುವಂತಿಲ್ಲ. ಶೂ ಸಾಕ್ಸ್ ಧರಿಸುವುದು ಕೂಡ ನಿಷಿದ್ಧ, ಚಪ್ಪಲಿ ಧರಿಸಿ ಬರಬೇಕು. ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮೊದಲೇ ಪರೀಕ್ಷಾ ಉಪ ಕೇಂದ್ರಗಳ ಬಳಿ ಹಾಜರಿರಬೇಕು. ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಅಕ್ರಮ ಎಸಗಿದರೆ ಅದು ಕ್ರಿಮಿನಲ್ ಪ್ರಕರಣವಾಗಲಿದೆ. ದೇಶದ ಇತರೆ ಎಲ್ಲ ಲೋಕಸೇವಾ ಆಯೋಗಗಳ ಪರೀಕ್ಷೆಗಳಿಗೂ ಅಂತಹವರನ್ನು ಡಿಬಾರ್ ಮಾಡಲಾಗುತ್ತದೆ.

