ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತೂಕದ ಯಂತ್ರಗಳ ಪರಿಶೀಲನೆ, ಸೀಲಿಂಗ್ ಪರಿಶೀಲನೆಯನ್ನು ಸಮರ್ಪಕವಾಗಿ ನಡೆಸಬೇಕು. ಈಗಾಗಲೇ ರಚಿಸಿರುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳೂ ಇದ್ದು, ಪ್ರತಿ ತಿಂಗಳಿಗೊಮ್ಮೆ ತೂಕ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳು ಸಾರ್ವಜನಿಕರಿಗೆ ತಿಳಿಯುವಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕಾರ್ಖಾನೆಗಳ ತೂಕದ ವ್ಯವಸ್ಥೆ ಹಾಗೂ ಕಬ್ಬು ನುರಿಸುವ ಪ್ರಕ್ರಿಯೆಯ ಮೇಲೆ ರೈತರಿಗೆ ವಿಶ್ವಾಸ ಮೂಡುವಂತಿರಬೇಕು. ಈ ನಿಟ್ಟಿನಲ್ಲಿ ತೂಕದ ಕೇಂದ್ರಗಳು ಸೇರಿದಂತೆ ಕಾರ್ಖಾನೆಯ ಒಳಭಾಗ ಮತ್ತು ಹೊರಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಮರ್ಪಕವಾಗಿ ಅಳವಡಿಸಿ, ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಕಬ್ಬು ನುರಿಸುವ ಪ್ರಕ್ರಿಯೆಯ ದೃಶ್ಯಾವಳಿಗಳನ್ನು ದಾಖಲಿಸಬೇಕು. ಲೈವ್ ಫೀಡ್ನ್ನು ಆಹಾರ ಇಲಾಖೆಗೆ ಒದಗಿಸುವುದರ ಜೊತೆಗೆ ಸಾರ್ವಜನಿಕರ ವೀಕ್ಷಣೆಗೆ ಡಿಸ್ಪ್ಲೇ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.ಕಾರ್ಖಾನೆಗಳಲ್ಲಿ ಸ್ಥಳೀಯ ಭಾಷೆ ತಿಳಿದಿರುವ ಸಿಬ್ಬಂದಿಯನ್ನು ನಿಯೋಜಿಸಿ, ಹಗಲು-ರಾತ್ರಿ ನಿಗಾ ವಹಿಸಬೇಕು. ರೈತರಿಗೆ ಅಗತ್ಯ ಮಾಹಿತಿ ನೀಡಿ, ಯಾವುದೇ ಗೊಂದಲ ಅಥವಾ ಸಂಶಯಗಳಿಗೆ ಅವಕಾಶವಾಗದಂತೆ ಸ್ಪಷ್ಟವಾಗಿ ಸಂವಹನ ನಡೆಸಬೇಕು. ಸಮಸ್ಯೆಗಳು ಉದ್ಭವಿಸಿದಲ್ಲಿ ಸ್ಥಳದಲ್ಲಿಯೇ ಪರಿಹರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪಾರರ್ದಶಕತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ, ಸಹಕಾರಿ ಇಲಾಖೆ ಉಪನಿಬಂಧಕಿ ಭಾಗ್ಯಶ್ರೀ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.