ಪ್ರಶಾಂತಶೆಟ್ಟಿ ಸಲಹೆ । ಅಂಗನವಾಡಿ 2 ರಲ್ಲಿ ಋತು ಸ್ರಾವ ನೈರ್ಮಲ್ಯ ನಿರ್ವಹಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ:ಹೆಣ್ಣು ಮಕ್ಕಳು ಋತುಸ್ರಾವ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಸಲಹೆ ನೀಡಿದರು.
ಮಂಗಳವಾರ ಪಟ್ಟಣದ ನ.ರಾ.ಪುರ -2 ಅಂಗನವಾಡಿ ಕೇಂದ್ರದಲ್ಲಿ ಋತುಸ್ರಾವ ನೈರ್ಮಲ್ಯ ನಿರ್ವಹಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಕೂಡ ಹೆಣ್ಣು ಮಕ್ಕಳ ಋತುಸ್ರಾವ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಜಾಹೀರಾತು ನೀಡುತ್ತಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ದಾಕ್ಷಾಯಿಣಿ ಬಾಯಿ ಮಾತನಾಡಿ, ಪ್ರತಿ ವರ್ಷ ಮೇ 28 ರಂದು ಋತುಸ್ರಾವ ನೈರ್ಮಲ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ಯೋಜನೆಯು 2014 ರ ಮೇ 28 ರಿಂದ ಜಾರಿಗೆ ಬಂದಿದೆ. ಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಸ್ಯಾನಿಟರಿ ಪ್ಯಾಡ್ ಉಪಯೋಗಿಸುವ ಬಗ್ಗೆ ಹಾಗೂ ಸ್ವಚ್ಛತೆಯಿಂದ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಹಿಂದೆ ಸರ್ಕಾರದಿಂದ ಶುಚಿ ಸಾನಿಟರಿ ಪ್ಯಾಡ್ ಗಳನ್ನು ಮಹಿಳಾ ಮತ್ತು ಮ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದರು.
ಹೆಣ್ಣು ಮಕ್ಕಳು ಮುಟ್ಟಿನ ಬಗ್ಗೆ ಯಾವುದೇ ಮೂಡನಂಬಿಕೆ ಇಟ್ಟುಕೊಳ್ಳಬಾರದು. ಮುಟ್ಟು ಅಥವಾ ಋತುಸ್ರಾವ ಎನ್ನುವುದು ಹೆಣ್ಣು ಮಕ್ಕಳಿಗೆ ಪ್ರಕೃತಿದತ್ತವಾಗಿ ಬಂದಿರುವ ಒಂದು ಕ್ರಿಯೆಯಾಗಿದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಸ್ನೇಹದ ವಾತಾವರಣ ಕಲ್ಪಿಸಿ ಕೊಡಬೇಕು ಎಂದರು. ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಪ್ರಿತಾ ಮಾತನಾಡಿ, ಋತುಚಕ್ರ ಮತ್ತು ಋತುಸ್ರಾವ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ಹೊಟ್ಟೆ ನೋವು ಬರುವುದು ಸಾಮಾನ್ಯವಾಗಿದ್ದು, ಆದಷ್ಟು ವೈಯಕ್ತಿಕ ಸ್ವಚ್ಛತೆ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಅನಿತ ಶೆಟ್ಟಿ, ಆಶಾ ಕಾರ್ಯಕರ್ತೆ ಕುಸಮ, ಕಿಶೋರಿ ಅನುಷ ಹಾಗೂ ಶಕ್ತಿ ಸಂಘದ ಸದಸ್ಯರು, ಪೋಷಕರು, ಕಿಶೋರಿಯರು ಭಾಗವಹಿಸಿದ್ದರು.