ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲಿಸಿದ ಶಾಸಕರು, 2022- 23ನೇ ಸಾಲಿನ ವಿವೇಕ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕು. ಆಯಾ ಗ್ರಾಪಂ ಅಧ್ಯಕ್ಷರು, ಪಿಡಿಒಗಳ ಜತೆಗೆ ಚರ್ಚಿಸಿ ಲಭ್ಯವಿರುವ ಜಾಗ ಗುರುತಿಸಿ ಶಾಲಾ ಕಾಂಪೌಂಡ್, ಸುಸಜ್ಜಿತ ಭೋಜನಾಲಯ, ಶೌಚಾಲಯ ಕಡ್ಡಾಯವಾಗಿ ನಿರ್ಮಾಣ ಮಾಡಿಸುವಂತೆ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆ, ಸಾಮಾನ್ಯ ಸಭೆ ಮತ್ತು ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಹಾಗೂ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನಲ್ಲಿ ಶಾಲಾ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ ಬಿಇಒ ಎಂ.ಎಚ್. ಪಾಟೀಲ, ತಾಲೂಕಿನಲ್ಲಿ 63 ಶಾಲಾ ಕೊಠಡಿಗಳು ದುರಸ್ತಿಗೆ ಬಾಕಿ ಇವೆ. ಇವುಗಳ ದುರಸ್ತಿಗಾಗಿ ಸುಮಾರು ₹1.27 ಕೋಟಿ ಅನುದಾನ ಬೇಕು. ಅಲ್ಲದೇ 43 ಕೊಠಡಿಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಬೇಕಾಗಿದೆ. 16 ಹೊಸ ಕೊಠಡಿಗಳು ಹೆಚ್ಚುವರಿಯಾಗಿ ಬೇಕಿದೆ ಎಂದು ತಿಳಿಸಿದರು.
ಒಂದು ಕೊಠಡಿ ನಿರ್ಮಾಣ ಮಾಡಲು ₹14.50 ಲಕ್ಷ ಬೇಕಾಗುತ್ತದೆ ಎಂದು ಪಂಚಾಯತ್‌ರಾಜ್ ಇಂಜನಿಯರಿಂಗ್ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಅವರು ಅನುದಾನ ಕಡಿಮೆ ಇದ್ದು, ಖರ್ಚು ಹೆಚ್ಚಾಗುತ್ತದೆ. ಮಳೆಯಿಂದ ಸೋರುವ ಕಟ್ಟಡಗಳಿಗೆ ತಾತ್ಕಾಲಿಕವಾಗಿ ತಗಡಿನ ಶೀಟ್ ಹಾಕಬಹುದು ಎಂದಾಗ ಶಾಸಕ ರುದ್ರಪ್ಪ ಲಮಾಣಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಿ. ಕಟ್ಟಡಗಳ ದುರಸ್ತಿ ಬಗ್ಗೆ ಎಂಜಿನಿಯರ್ ಜತೆಗೆ ಸಭೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲಿಸಿದ ಶಾಸಕರು, 2022- 23ನೇ ಸಾಲಿನ ವಿವೇಕ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜು ರಜೆ ದಿನದಲ್ಲಿ ಕಾಮಗಾರಿ ಪೂರ್ಣ ಮಾಡುವುದು ಬಿಟ್ಟು, ಇಷ್ಟು ದಿನ ಏನು ಮಾಡಿದ್ದಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ತಿಂಗಳು ಒಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ತಾಲೂಕಿನ ಜಂಗಮನಕೊಪ್ಪ ಕ್ರಾಸ್‌ನಿಂದ ಕರ್ಜಗಿ ಕಡೆಗೆ ರಸ್ತೆ ಮರು ಡಾಂಬರೀಕರಣ ಮಾಡಲಾಗುತ್ತದೆ. ಕರ್ಜಗಿ ಸಮೀಪದಲ್ಲಿ ಗುಂಡಿಗಳು ಬಿದ್ದಿದ್ದು, ಪಾತ್ ಹೋಲ್ ಮುಚ್ಚಿಸಲಾಗುತ್ತಿದೆ. ನೆಲೋಗಲ್ ಪ್ರವಾಸಿ ಮಂದಿರ ನಿರ್ಮಾಣ ಬಗ್ಗೆ ಈಗಾಗಲೇ ಟೆಂಡರ್ ಆಗಿದ್ದು, ಏಜೆನ್ಸಿಗೆ ಇನ್ನು ಹಸ್ತಾಂತರ ಆಗಿಲ್ಲ ಎಂದು ಪಿಡಬ್ಲ್ಯುಡಿ ಅಧಿಕಾರಿ ಮಾಹಿತಿ ನೀಡಿದರು. ವಿವಿಧ ಮಾರ್ಗಗಳ ದುರಸ್ತಿಗಾಗಿ ₹25 ಕೋಟಿ ಮೌಲ್ಯದ ಅಂದಾಜು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.ಕೃಷಿ ಇಲಾಖೆ ಆರೋಗ್ಯ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪಿಎಂಜಿಎಸ್‌ವೈ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.ತಾಪಂ ಕೆಡಿಪಿಗೆ ನಾಮನಿರ್ದೇಶನಗೊಂಡ ಹೊಸರಿತ್ತಿಯ ಶಂಕ್ರಪ್ಪ ಅಂಬಿಗೇರ, ಕಬ್ಬೂರಿನ ಮಹಾದೇವಪ್ಪ ಹೊಸಳ್ಳಿ, ಕಳ್ಳಿಹಾಳದ ಮಲ್ಲಿಕಾರ್ಜುಣ ಬೂದಗಟ್ಟಿ, ಚಿಕ್ಕಲಿಂಗದಹಳ್ಳಿಯ ಪರಮೇಶ್ವರ ಮಣ್ಣಮ್ಮನವರ, ಬೆಳವಿಗಿಯ ಹುಸೇನಸಾಬ ಹುಬ್ಬಳ್ಳಿ, ಬಸಾಪುರದ ಸುಮಂಗಲಾ ಇಪ್ಪಿಕೊಪ್ಪ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಎಂ.ಎಂ. ಮೈದೂರ, ತಾಪಂ ಆಡಳಿತಾಧಿಕಾರಿ ಸುರೇಶ ಹುಗ್ಗಿ, ತಾಪಂ ಇಒ ಪಿ.ಎನ್. ಹುಬ್ಬಳ್ಳಿ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಕಾಮಗಾರಿಗಳ ಚಾಲನೆಗೆ ಅಭ್ಯಂತರವಿಲ್ಲ: ಶಾಸಕ
ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್ ಯೋಜನಾ ಅನುಷ್ಠಾನ ಉಪ ವಿಭಾಗದ ಪರಿಶೀಲನೆ ನಡೆಸಿದ ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಇನ್ನೂ ಎಲ್ಲೆಲ್ಲಿ ಕಾಮಗಾರಿ ಆರಂಭ ಆಗಿಲ್ಲವೋ ಅಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದುಕೊಂಡು ಕಾಮಗಾರಿಗಳಿಗೆ ಚಾಲನೆ ನೀಡಿ. ನನ್ನದೇನೂ ಅಭ್ಯಂತರವಿಲ್ಲ ಎಂದು ಅಧಿಕಾರಿಗಳಿಗೆ ಅಭಯ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.