ಕನ್ನಡಪ್ರಭ ವಾರ್ತೆ ತುಮಕೂರುಮಳೆಯಿಂದ ಮನೆಗೆ ಹಾನಿ ಹಾಗೂ ಜಾನುವಾರು ಸಾವು ಪ್ರಕರಣದಲ್ಲಿ ಸಂಬಂಧಿಸಿದ ಮಾಲೀಕರಿಗೆ ಶೀಘ್ರವಾಗಿ ಪರಿಹಾರ ಮೊತ್ತ ಪಾವತಿಯಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮುಂಗಾರು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಎನ್. ಮಾತನಾಡಿ, ಜಿಲ್ಲೆಯಾದ್ಯಂತ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ ನಡೆಯುತ್ತಿದೆ. ರಾಗಿ ಬಿತ್ತನೆ ಜೂನ್ ೨ನೇ ವಾರದಿಂದ ನಡೆಯಲಿದೆ ಎಂದರು.
ಕೃಷಿ ಅಧಿಕಾರಿಗಳು ನಿಯಮಿತವಾಗಿ ವಿತರಣಾ ಕೆಂದ್ರಗಳಿಗೆ ಭೇಟಿ ನೀಡಬೇಕು. ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಿವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲೆಯ ರೈತರು ಕಿರು ಸಾಲಗಳನ್ನು ಖಾಸಗಿಯಾಗಿ ಪಡೆದಿರುವ ಅಂಕಿ ಅಂಶಗಳನ್ನು ಸಂಗ್ರಹಿಸಿ, ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತ ಸಂಪರ್ಕ ಸಭೆಗಳನ್ನು ಏರ್ಪಡಿಸಬೇಕು. ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯಗಳ ಹಾಗೂ ಯೋಜನೆಗಳ ಮಾಹಿತಿಯನ್ನು ಎಲ್ಲಾ ರೈತರಿಗೆ ನೀಡಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಶಸ್ತ್ರ ಚಿಕಿತ್ಸಾ ಕೊಠಡಿ ಸ್ಚಚ್ಛತೆ ಪರಿಶೀಲಿಸಿ: ಡೆಂಗ್ಯೂ, ಚಿಕುಂಗುನ್ಯಾ, ಮಲೇರಿಯಾದಂತಹ ರೋಗಗಳು ಹರಡದಂತೆ ನಿಯಂತ್ರಣವಹಿಸಲು ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಇರುವಂತಹ ಶಸ್ತ್ರಚಿಕಿತ್ಸೆ ಕೊಠಡಿಗಳಲ್ಲಿ ಶುದ್ಧತೆ ಕಾಯ್ದುಕೊಂಡಿರುವ ಬಗ್ಗೆ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಇರುವ ಬಗ್ಗೆ, ವಾರದಲ್ಲಿ ಎರಡು ಬಾರಿ ತಾಲೂಕು ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕಳೆದ ವಾರ ಮಧುಗಿರಿ ತಾಲೂಕಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ಕಸದ ರಾಶಿ ಕಂಡು ಬಂದಿದ್ದು, ಇಂತಹ ಘಟನೆಗಳು ಮರು ಕಳಿಸದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕೆಂದು ಸೂಚಿಸಿದರು. ಶಿಥಿಲಾವಸ್ಥೆ ಶಾಲೆಗಳನ್ನು ಗುರುತಿಸಿ: ಮೇ ೨೯ರಿಂದ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಮಕ್ಕಳು ಶಾಲೆಗಳಿಗೆ ಕಲಿಯುವ ಉದ್ದೇಶದಿಂದ ಬರುತ್ತಾರೆ. ಮಕ್ಕಳಿಗೆ ಅಗತ್ಯ ಸೌಕರ್ಯ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳ ಸಮೀಕ್ಷೆಯನ್ನು ತಾಲೂಕು ಬಿಇಒಗಳು ಹಾಗೂ ಪಿಆರ್‌ಇಡಿ ಕಾರ್ಯನಿರ್ವಾಹಣಾಧಿಕಾರಿಗಳು ಜಂಟಿಯಾಗಿ ಕೈಗೊಂಡು ಶಾಲೆಗಳ ಗೋಡೆ ಹಾಗೂ ಮೇಲ್ಛಾವಣಿ ಶಿಥಿಲಾವಸ್ಥೆ, ದುರಸ್ತಿ, ಅಡಿಗೆ ಕೋಣೆ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಬಗ್ಗೆ ಖಚಿತಪಡಿಸಿಕೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಸಂಬಂಧಿಸಿದಂತೆ ಯಾವುದೇ ಬಿಲ್‌ನ್ನು ಬಾಕಿಯಿಟ್ಟುಕೊಳ್ಳದೆ, ತ್ವರಿತ ಪಾವತಿಗೆ ಕ್ರಮ ಕ್ಯೆಗೊಳ್ಳುವಂತೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಪಿಆರ್‌ಇಡಿ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಜಿಲ್ಲೆಯ ಎಲ್ಲಾ ಉಪವಿಭಾಗಧಿಕಾರಿಗಳು, ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.