ಬಿರುಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : May 28, 2024, 01:03 AM IST
ಸುರಪುರ ತಾಲೂಕಿನ ಕೆಂಭಾವಿ ರೈತ ಬಸವರಾಜ ಬೈಚಬಾಳ ಅವರ ಜಮೀನಿನಲ್ಲಿ ಬೆಳೆದ ನಿಂಬೆ ಮತ್ತು ಪೇರಲ್ ಮರಗಳು ಗಾಳಿಯ ಹೊಡೆತಕ್ಕೆ ನೆಲಕಚ್ಚಿರುವುದು. | Kannada Prabha

ಸಾರಾಂಶ

ಮಿನಿ ರೈಸ್ ಮಿಲ್, ಆಯಿಲ್ ಮಿಲ್, ಪೊಲೀಸ್ ಠಾಣೆ, ಶಾಲೆಗೂ ಹಾನಿ । ದರೆಗುರುಳಿದ ನೂರು ವರ್ಷದ ಆಲದ ಮರ

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಕಡು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.ಕೆಂಭಾವಿ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಸಂಜೆ 7 ರ ಸುಮಾರಿಗೆ ಪ್ರಾರಂಭವಾದ ಭಾರಿ ಬಿರುಗಾಳಿ ಸಹಿತ ಮಳೆ ಸುಮಾರು ಒಂದು ಗಂಟೆಗಳ ಕಾಲ ನಿರಂತವಾಗಿ ಸುರಿದಿದೆ.1ನೇ ವಾರ್ಡ್ ನಲ್ಲಿ ಅತೀ ಹೆಚ್ಚು ವಿದ್ಯುತ್ ಕಂಬಗಳು ಬಿರುಗಾಳಿಯ ರಭಸಕ್ಕೆ ನೆಲಕ್ಕುರುಳಿದರೆ, ಪೊಲೀಸ್ ಕಚೇರಿ ಮತ್ತು ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯಲ್ಲಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಆಲದ ಮರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೆ ಜೀವಹಾನಿ ಸಂಭವಿಸಿಲ್ಲ.ಬಿರುಗಾಳಿ ರಭಸಕ್ಕೆ ಮುಖ್ಯ ಬಜಾರ ಪ್ರದೇಶದ ಹಲವು ಅಂಗಡಿಗಳಿಗೆ ನೀರು ನುಗ್ಗಿ ಬಟ್ಟೆ ಬರೆ ಸೇರಿದಂತೆ ಇನ್ನಿತರೆ ವಸ್ತುಗಳು ನೀರಿಗೆ ಆಹುತಿ ಆಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕೆಂಭಾವಿ ಪಟ್ಟಣದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಭಾನುವಾರ 7 ಗಂಟೆಯಿಂದ ಸೋಮವಾರ ಮಧ್ಯಾಹ್ನದವರೆಗೂ ಪಟ್ಟಣದಲ್ಲಿ ವಿದ್ಯುತ್ ನಿಲುಗಡೆ ಉಂಟಾಗಿತ್ತು.

ಬಾಕ್ಸ:

ರಸ್ತೆ ಬಂದ್:

ಕೆಂಭಾವಿಯಿಂದ ಯಡಿಯಾಪೂರ ಗ್ರಾಮಕ್ಕೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಹಾಕಿದ ಎಲ್ಲ ವಿದ್ಯುತ್ ಕಂಬ ಹಾಗೂ ಭಾರಿ ಗಾತ್ರದ ಮರಗಳು ಭೂಮಿಗೆ ಅಪ್ಪಳಿಸಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಜಮೀನುಗಳಲ್ಲಿರುವ ರೈತರ ಗುಡಿಸಲುಗಳು, ವಿದ್ಯುತ್ ಟ್ರಾನ್ಸ್ಫಾರ್ಮಗಳು, ಕೋಳಿ ಗುಡಿಸಲು, ದನಕರು ಕಟ್ಟುವ ಗುಡಿಸಲು ಸೇರಿದಂತೆ ರೈತಾಪಿ ವರ್ಗದ ಹಲವು ಮನೆಗಳು ಬಿರುಗಾಳಿಗೆ ಧರೆಗುರುಳಿವೆ.

ಯಡಿಯಾಪುರ ರಸ್ತೆಯಲ್ಲಿರುವ ಇನ್ನೂ ಕಾರ್ಯಾರಂಭ ಮಾಡದ ಸಣ್ಣ ಕೈಗಾರಿಕೆಯೊಂದು ಗಾಳಿಯ ರಭಸಕ್ಕೆ ಸಂಪೂರ್ಣ ನೆಲಕಚ್ಚಿ ಅದರ ಮೇಲಿದ್ದ ಪತ್ರಾಸ್‌ಗಳು ಸುಮಾರು ಮೂರು ಕಿಮೀ ನಷ್ಟು ಹಾರಿ ಹೋಗಿ ಯಂತ್ರಗಳು ಚಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಕಂಡು ಬಂದಿತು.

* ಆಯಿಲ್ ಮಿಲ್‌ಗೆ ಹಾನಿ:

ರಾಚಪ್ಪ ಕುಂಬಾರ ಎಂಬುವರಿಗೆ ಸೇರಿದ ಮಿನಿ ರೈಸ್ ಮಿಲ್, ಮಿನಿ ಆಯಿಲ್ ಮಿಲ್ ಸೇರಿದಂತೆ ಹಲವು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಇನ್ನೆರಡು ದಿನಗಳಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಈ ಕೈಗಾರಿಕೆ ಮಳೆ ಗಾಳಿಯ ಹೊಡೆತಕ್ಕೆ ಸಿಲುಕಿ ನಲುಗಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕೈಗಾರಿಕೆಯ ಪಕ್ಕದಲ್ಲಿರುವ ಬಸವರಾಜ ಬೈಚಬಾಳ ಎಂಬುವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ನಿಂಬೆ ಮತ್ತು ಪೇರಲ ಮರಗಳು ಸಂಪೂರ್ಣ ನೆಲಕಚ್ಚಿದ್ದು ಇದರಿಂದ ರೈತ ಕಂಗಾಲಾಗಿದ್ದಾನೆ.ಮಾಳಹಳ್ಳಿ ಗ್ರಾಮದ ಶಿವನಗೌಡ ಪಾಟೀಲ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸಾಗವಾನಿ, ಪೇರಲ, ಹೆಬಗಬೇವಿನ ಮರಗಳು ಗಾಳಿಯ ರಭಸಕ್ಕೆ ಸಿಲುಕಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.* ಬೇಕಿದೆ ಸರ್ಕಾರದ ನೆರವು :

ಮಳೆಯ ಪ್ರಮಾಣ 46.06 ಮಿಮೀ ನಷ್ಟು ಮಳೆ ಸುರಿದಿದ್ದು, ಒಟ್ಟಾರೆ ಭಾನುವಾರ ಸುರಿದ ಭಾರಿ ಬಿರುಗಾಳಿ ಸಹಿತ ಮಳೆ ವಲಯದಲ್ಲಿ ಹಲವು ಆವಾಂತರವನ್ನೆ ಸೃಷ್ಟಿಸಿದ್ದು, ಸರ್ಕಾರ ಯಾವ ರೀತಿ ರೈತರ ನೆರವಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ